ಜುಲೈ 30ರ ಒಳಗೆ ಬಾಕಿ ಹಣ ಪಾವತಿಸಲಾಗುವುದು: ಸಚಿವ ಮಹಾದೇವ ಪ್ರಸಾದ್

ಮಂಗಳವಾರ, 30 ಜೂನ್ 2015 (17:31 IST)
2013-14ನೇ ಸಾಲಿನಲ್ಲಿ ನೀಡಬೇಕಿರುವ 923 ಕೋಟಿ ರೂ. ಬಾಕಿ ಹಣವನ್ನು ಕಬ್ಬು ಬೆಳೆಗಾರರಿಗೆ ಜುಲೈ 30ರ ಒಳಗೆ ಪಾವತಿಸಲಿದ್ದೇವೆ ಎಂದು ರಾಜ್ಯದ ಸಕ್ಕರೆ ಸಚಿವ ಮಹಾದೇವ ಪ್ರಸಾದ್ ಹೇಳಿದ್ದಾರೆ.  
 
ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಅವರು, 2013-14ನೇ ಸಾಲಿನಲ್ಲಿ ಒಟ್ಟು 923 ಕೋಟಿ ರೂ ಬಾಕಿ ಹಣ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮೊತ್ತವನ್ನೂ ಕೂಡ ಜುಲೈ 31ರ ಒಳಗೆ ಪಾವತಿಸಬೇಕಿದೆ. ಇನ್ನು ಜುಲೈ 10ರ ಒಳಗೆ ಸರ್ಕಾರ ನೀಡಬೇಕಿರುವ 100 ಕೋಟಿ ರೂ. ಹಣವನ್ನು ನೀಡಲಿದ್ದೇವೆ. ಅಂತೆಯೇ ಸಕ್ಕರೆ ಕಾರ್ಖಾನೆಗಳೂ ಕೂಡ 100 ಕೋಟಿ ರೂ. ಪಾವತಿಸುವುದಿದೆ. ಈ ಹಿನ್ನೆಲೆಯಲ್ಲಿ ವಶಪಡಿಸಿಕೊಂಡಿರುವ ಸಕ್ಕರೆಯನ್ನು ಮಾರಿ ಅದನ್ನೂ ನೀಡಲಿದ್ದೇವೆ ಎಂದರು. 
 
ಇನ್ನು ಇದೇ ವೇಳೆ 2014-15 ಸಾಲಿನ ಬಾಕಿ ಹಣ ಪಾವತಿಸುವಲ್ಲಿ ಸರ್ಕಾರಕ್ಕೆ ಕಷ್ಟವಾಗಲಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಳಿತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊಡಲು ಸಾಧ್ಯವಿಲ್ಲ. ಏಕೆಂದರೆ ಆಗ ರಫ್ತು ವಿಚಾರದಲ್ಲಿ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಬೆಲೆ ಇದ್ದರೂ ಕೂಡ ಸರ್ಕಾರ ಹೆಚ್ಚಿನ ಬೆಲೆಗೆ ಸಕ್ಕರೆ ಮಾರಲು ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ಮೋಸವಾಗಿದೆ. ಆದ್ದರಿಂದ 2014-15 ನೇ ಸಾಲಿನ ಬಾಕಿ ಹಣ ಪಾವತಿಸುವಲ್ಲಿ ಗೊಂದಲವಿದೆ. ಅಲ್ಲದೆ ರಾಜ್ಯ ಸರ್ಕಾರಕ್ಕೆ 400 ರೂ. ಹೊರೆಯಾಗಲಿದೆ. ಆದ್ದರಿಂದ ಪ್ರತಿ ಟನ್‌ಗೆ 2500 ರೂ ಕೊಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನವದೆಹಲಿಗೆ ತೆರಳಿ ಕೇಂದ್ರದೊಂದಿಗೆ ಚರ್ಚಿಸಲಾಗುವುದು ಎಂದರು. 
 
ಸರ್ಕಾರವು ಕಬ್ಬು ಬೆಳೆಗಾರರಿಗೆ ಎರಡೂ ಸಾಲಿನಲ್ಲಿ ಒಟ್ಟು 2500 ಕೋಟಿ ಬಾಕಿ ಹಣ ಪಾವತಿಸಬೇಕಿದೆ. ಆದ್ದರಿಂದ ಪ್ರತಿಪಕ್ಷಗಳೂ ಕೂಡ ಸರ್ಕಾರದ ವಿರುದ್ಧ ಸಮರ ಸಾರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಕ್ಕರೆ ಸಚಿವರು ಸದನದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದರು. 

ವೆಬ್ದುನಿಯಾವನ್ನು ಓದಿ