ಗ್ರಾ. ಪಂಚಾಯತ್ ಚುನಾವಣೆ ಹಿನ್ನೆಲೆ ಘರ್ಷಣೆ: ಐವರಿಗೆ ಗಾಯ

ಶುಕ್ರವಾರ, 29 ಮೇ 2015 (13:35 IST)
ಇಂದು ಗ್ರಾಮ ಪಂಚಾಯತ್ ಮತದಾನ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮತದಾನದ ಗುಂಗಿನಲ್ಲಿದ್ದ ಕೆಲ ಅಭ್ಯರ್ಥಿಗಳು ಹಾಗೂ ಬೆಂಬಲಿಗರ ನಡುವೆ ವಾಗ್ವಾದ ಏರ್ಪಟ್ಟು ಘರ್ಷಣೆ ಸಂಭವಿಸಿದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕೆ.ನಿಡುಗಣೆ ಗ್ರಾಮದಲ್ಲಿ ನಡೆದಿದೆ. 
 
ಈ ಘಟನೆಯು ಹೆಬ್ಬಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೆ.ನಿಡುಗಣೆ ಗ್ರಾಮದಲ್ಲಿ ನಡೆದಿದ್ದು, ಇಲ್ಲಿ ಪಂಚಾಯತ್ ಚುನಾವಣಾ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಬೋಪಣ್ಣ, ರಾಮ್ ತಮ್ಮಯ್ಯ ಹಾಗೂ ಅಯ್ಯಪ್ಪ ಎಂಬುವವರ ನಡುವೆ ವಾಗ್ವಾದ ಏರ್ಪಟ್ಟಿತ್ತು ಎನ್ನಲಾಗಿದ್ದು, ಈ ವೇಳೆ ಅವರವರ ಬೆಂಬಲಿಗರೂ ಕೂಡ ವಾಗ್ವಾದದಲ್ಲಿ ತಲೆದೋರಿದ ಪರಿಣಾಮ ಘರ್ಷಣೆ ನಡೆದಿದೆ ಎನ್ನಲಾಗಿದೆ. 
 
ಇನ್ನು ಘಟನೆ ಹಿನ್ನೆಲೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಮಂಗಳೂರು ಹಾಗೂ ಮಡಿಕೇರಿ ಜಿಲ್ಲಾಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಭ್ಯರ್ಥಿ ಬೋಪಣ್ಣ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಈ ಸಂಬಂಧ ಇತರೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಗೆ ಕಾರಣರಾಗಿ ಪರಾರಿಯಾಗಿರುವ ಅಭ್ಯರ್ಥಿಗಳಾದ ತಮ್ಮಯ್ಯ ಹಾಗೂ ಅಯ್ಯಪ್ಪ ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ. 

ವೆಬ್ದುನಿಯಾವನ್ನು ಓದಿ