2015ನೇ ಸಾಲಿನ ಗ್ರಾಮ ಪಂಚಾಯತ್ ಚುನಾವಣಾ ವೇಳಾಪಟ್ಟಿ

ಮಂಗಳವಾರ, 5 ಮೇ 2015 (16:41 IST)
ಗ್ರಾಮ ಪಂಚಾಯತ್ ಚುನಾವಣೆ-2015ರ ವೇಳಾಪಟ್ಟಿ ಬಹಿರಂಗಗೊಂಡಿದ್ದು, ರಾಜ್ಯದಲ್ಲಿನ ಒಟ್ಟು 5844 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದ್ದು, ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. 
 
ಮೊದಲ ಹಂತದಲ್ಲಿ ಮೈಸೂರು ಮತ್ತು ಬೆಳಗಾವಿ ಹಾಗೂ ಎರಡನೇ ಹಂತದಲ್ಲಿ ಬೆಂಗಳೂರು ಮತ್ತು ಕಲ್ಬುರ್ಗಿ ಕಂದಾಯ ವಿಭಾಗಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಯು ಮೇ 29 ಹಾಗೂ ಎರಡನೇ ಹಂತದ ಚುನಾವಣೆಯು ಜೂನ್ 2ಕ್ಕೆ ನಡೆಯಲಿದೆ.  
 
ಈ ಬಗ್ಗೆ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಅವರು ಸಂಪೂರ್ಣ ಮಾಹಿತಿ ನೀಡಿದ್ದು, ಮೊದಲ ಹಂತದ ಚುನಾವಣೆಗೆ ಮೇ 11ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅಂತೆಯೇ ಎರಡನೇ ಹಂತದ ಚುನಾವಣಾ ಅಧಿಸೂಚನೆಯನ್ನು ಮೇ 15ಕ್ಕೆ ಹೊರಡಿಸಲಾಗುತ್ತದೆ. ಒಟ್ಟು 5844 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, ಉಳಿದ 220 ಗ್ರಾಮ ಪಂಚಾಯತ್‌ಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ ಎಂಬುದಾಗಿ ಮಾಹಿತಿ ನೀಡಿದ್ದಾರೆ. 
 
ಸಂಪೂರ್ಣ ವಿವರ:
ಮೊದಲ ಹಂತ: ಮೈಸೂರು ಮತ್ತು ಬೆಳಗಾವಿ ವಿಭಾಗಕ್ಕೆ ಸೇರಿದ ಜಿಲ್ಲೆಗಳ ಚುನಾವಣೆಯು ಮೇ 29ಕ್ಕೆ ನಡೆಯಲಿದ್ದು, ಮೊದಲ ಹಂತವಾಗಿದೆ. ಈ ಸಂಬಂಧ ಮೇ 11ರಂದು ಅಧಿಸೂಚನೆ ಹೊರ ಬೀಳಲಿದ್ದು, ಮೇ-18 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿರುತ್ತದೆ. ನಾಮಪತ್ರ ಪರಿಶೀಲನೆಗೆ ಮೇ-19 ಕಡೆ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಮೇ-21 ಕಡೆ ದಿನವಾಗಿದೆ.  
 
ಎರಡನೇ ಹಂತ: ಈ ಹಂತದಲ್ಲಿ ಬೆಂಗಳೂರು ಹಾಗೂ ಕಲಬುರ್ಗಿ ಕಂದಾಯ ವಿಭಾಗಗಳಿಗೆ ಸೇರಿದ ಜಿಲ್ಲೆಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 2ರಂದು ಚುನಾವಣೆ ನಡೆಯಲಿದೆ. ಈ ಸಂಬಂಧ ಮೇ 15ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಮೇ-22 ಕೊನೆ ದಿನವಾಗಿದೆ. ಮೇ-23ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ-25 ನಾಮಪತ್ರ ಹಿಂಪಡೆಯುವ ದಿನವಾಗಿರುತ್ತದೆ. 
 
ಇನ್ನು ಎರಡೂ ಹಂತದಲ್ಲಿ ಚುನಾವಣೆ ಮುಗಿದ ಬಳಿಕ ಜೂನ್ 5ಕ್ಕೆ ಎಣಿಕೆ ಕಾರ್ಯ ಆಂಭವಾಗಲಿದ್ದು, ಫಲಿತಾಂಶ ಅಂದೇ ಪ್ರಕಟಗೊಳ್ಳಲಿದೆ. 
 
ಮೊದಲ ಹಂತದಲ್ಲಿ ಚುನಾವಣೆ ಎದುರಿಸಲಿರುವ ಜಿಲ್ಲೆಗಳು: 
ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಗದಗ, ಬೀದರ್ ಸೇರಿದಂತೆ ಇತರೆ ಜಿಲ್ಲೆಗಳಾಗಿವೆ.  
 
ಎರಡನೇ ಹಂತದಲ್ಲಿ ಚುನಾವಣೆ ಎದುರಿಸಲಿರುವ ಜಿಲ್ಲೆಗಳು: 
ಕಲಬುರ್ಗಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು, ಯಾದಗಿರಿ ಹಾಗೂ ಕೊಪ್ಪಳ ಸೇರಿದಂತೆ ಇತರೆ ಜಿಲ್ಲೆಗಳಾಗಿವೆ.  

ವೆಬ್ದುನಿಯಾವನ್ನು ಓದಿ