ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಅತಿಥಿಗಳೇ ಗೈರು: ವಿದ್ಯಾರ್ಥಿಗಳಿಗೆ ನಿರಾಸೆ

ಶನಿವಾರ, 10 ಅಕ್ಟೋಬರ್ 2015 (17:50 IST)
ನಗರದ ಕೆಂಪೇಗೌಡ ಭವನದ ಬಳಿಯಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಇಂದು ಒಕ್ಕಲಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವು ಅತಿಥಿಗಳಿಲ್ಲದೆ ಬಣಗುಟ್ಟಿದ್ದು, ಪೋಷಕರ ಮತ್ತು ವಿದ್ಯಾರ್ಥಿಗಳ ಅಸಮಧಾನಕ್ಕೆ ಕಾರಣವಾಗಿದೆ. 
 
ಹೌದು, ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯ ಒಕ್ಕಲಿಗರ ಸಂಘವು ಇಂದು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ 600ಕ್ಕೂ ಹೆಚ್ಚು ಮಂದಿ ಪ್ರತಿಭಾವಂತ ಮಕ್ಕಳು ಮತ್ತು ಅವರ ಪೋಷಕರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
 
ಆದರೆ ಕಾರ್ಯಕ್ರಮವು 10 ಗಂಟೆಗೆ ಆರಂಭವಾಗುವವುದು ಎಂದು ತಿಳಿಸಲಾಗಿತ್ತಾದರೂ ಮಧ್ಯಾಹ್ನ ಮೂರು ಗಂಟೆಯಾದರೂ ಕೂಡ ಹಾಜರಾಗಬೇಕಿದ್ದ ಯಾವೊಬ್ಬ ಅತಿಥಿಗಳೂ ಕೂಡ ಆಗಮಿಸಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವ ಪದಾಧಿಕಾರಿಗಳ ಸಹಿ ಇಲ್ಲದ ಪ್ರಮಾಣಪತ್ರವನ್ನೇ ತೆಗೆದುಕೊಂಡು ಹಿಂದಿರುಗುವಂತಾಯಿತು. ಈ ವೇಳೆ ಮಕ್ಕಳ ಪೋಷಕರು ಪ್ರತಿಕ್ರಿಯಿಸಿ ನಮ್ಮನ್ನು ಕಾರ್ಯಕ್ರಮಕ್ಕೆ ಕರೆಸಿ ಅಪಮಾನ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿ ಕಾರ್ಯಕ್ರಮ ಆಯೋಜಕರ ವಿರುದ್ಧ ಗರಂ ಆದರು.  
 
ಇನ್ನು ಕಾರ್ಯಕ್ರಮಕ್ಕೆ ಸಚಿವ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಹಾಗೂ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಮೂವರಲ್ಲಿ ಯಾರೊಬ್ಬರೂ ಕೂಡ ಆಗಮಿಸಲಿಲ್ಲ. 
 
ಇನ್ನು ಕಿಮ್ಸ್ ಆಸ್ಪತ್ರೆಯ ನರ್ಸ್‌ಗಳು ತಮ್ಮ ಉದ್ಯೋಗವನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಅಪ್ಪಾಜಿಗೌಡರು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂಬ ಮಾಹಿತಿ ತಿಳಿದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಮುತ್ತಿಗೆ ಹಾಕಲು ಪ್ರತಿಭಟನಾನಿರತ ನರ್ಸ್‌ಗಳು ಯೋಜನೆ ರೂಪಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಅತಿಥಿಗಳೆಲ್ಲರೂ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ