ಪಕ್ಷದಲ್ಲಿ ದಲಿತರಿಗೆ ಅವಕಾಶವಿದೆ ಎಂದ ಹರಿಪ್ರಸಾದ್: ಸಿದ್ಧರಾಮಯ್ಯ ಕುರ್ಚಿ ಭದ್ರವೇ ?

ಸೋಮವಾರ, 12 ಅಕ್ಟೋಬರ್ 2015 (12:28 IST)
ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಹಾಗೂ ಸಿಎಂ ಸ್ಥಾನದಲ್ಲಿ ದಲಿತರಿಗೆ ಮಾನ್ಯತೆ ನೀಡಲಾಗುತ್ತಿಲ್ಲ ಎಂದು ಅತೃಪ್ತರಾಗಿದ್ದ ನಗರದ ಕೆಲ ಶಾಸಕರು ಇಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಬಿ.ಕೆ.ಹರಿ ಪ್ರಸಾದ್ ಅವರೊಂದಿಗೆ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ.   
 
ಸಭೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಸದಸ್ಯ ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿ ನಗರದ ವಿಧಾನಸಭಾ ಸದಸ್ಯ ಮುನಿರತ್ನ ಸೇರಿದಂತೆ ಇತರರು ಸೇರಿದ್ದರು ಎನ್ನಲಾಗಿದ್ದು, ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಂಡ್ಯ ಪ್ರವಾಸ ಕೈಗೊಂಡಿದ್ದ ವೇಳೆ ನಡೆದಂತಹ ಕೆಲ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. 
 
ಇನ್ನು ಸಭೆಯ ಬಳಿಕ ಮಾತನಾಡಿರುವ ಬಿ.ಕ್.ಹರಿಪ್ರಸಾದ್, ನಮ್ಮ ಪಕ್ಷದಲ್ಲಿ ದಲಿತ ಸಮುದಾಯಕ್ಕೆ ಹೆಚ್ಚಿನ ಮಾನ್ಯತೆ ಇದೆ. ಆದ ಕಾರಣ ಈಗಾಗಲೇ ಮಹಾರಾಷ್ಟ್ರದಲ್ಲಿ ದಲಿತ ಸದಸ್ಯರನ್ನು ಸಿಎಂ ಮಾಡಿದ್ದೆವು. ಆದರೆ ರಾಜ್ಯದಲ್ಲಿ ದಲಿತರು ಸಿಎಂ ಗದ್ದುಗೆ ಏರಬೇಕೆ ಎಂಬ ಬಗ್ಗೆ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. 
 
ರಾಜ್ಯದಲ್ಲಿ ದಲಿತ ಸಿಎಂ ಬೇಕು ಎಂಬ ಒಕ್ಕೊರಲಿನ ಪ್ರತಿಕ್ರಿಯೆ ದಲಿತ ಸಮುದಾಯದಿಂದ ವ್ಯಕ್ತವಾಗಿರುವಾಗಲೇ ಹರಿಪ್ರಸಾದ್ ಅವರು ಈ ಹೇಳಿಕೆ ನೀಡಿರುವುದು ಕೆಲ ಅನುಮಾನಗಳಿಗೆ ಕಾರಣವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಭವಿಷ್ಯದಲ್ಲಿ ಕಂಟಕ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. 

ವೆಬ್ದುನಿಯಾವನ್ನು ಓದಿ