ಹವ್ಯಕ ಮಹಾಮಂಡಲ ಸಭೆ: ರಾಘವೇಶ್ವರ ಶ್ರೀಗಳು ಪೀಠ ತ್ಯಜಿಸಲಿ

ಶನಿವಾರ, 20 ಡಿಸೆಂಬರ್ 2014 (18:05 IST)
ರಾಘವೇಂದ್ರ ಮಠದ ಪೀಠಾಧ್ಯಕ್ಷರಾಗಿರುವ ರಾಘವೇಶ್ವರ ಶ್ರೀಗಳು ರಾಮಕಥಾ ಗಾಯಕಿ ಪ್ರೇಮಲತಾ ಮೇಲಿನ ಲೈಂಗಿಕ ಆರೋಪವನ್ನು ಎದುರಿಸುತ್ತಿದ್ದು, ಮಠದ ಪೀಠಾಧ್ಯಕ್ಷ ಸ್ಥಾನವನ್ನು ಪರೋಕ್ಷವಾಗಿ ತ್ಯಜಿಸಲಿ ಎಂಬ ಅಭಿಪ್ರಾಯವನ್ನು ಹವ್ಯಕ ಸಮುದಾಯದ ಮುಖಂಡರು ಹೊರ ಹಾಕಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. 
 
ಜಿಲ್ಲೆಯ ಸಾಗರದಲ್ಲಿ ಇಂದು ಹವ್ಯಕ ಮಹಾ ಮಂಡಲ ಸಭೆ ನಡೆದಿದ್ದು, ಸಭೆಯಲ್ಲಿ ಮುಖಂಡರು ಮಠ ಹಾಗೂ ಶ್ರೀಗಳ ಬಗ್ಗೆ ಎಲ್ಲಾ ರೀತಿಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. 
 
ಈ ಹಿಂದೆ ಪ್ರೇಮಲತಾ ಮೇಲಿನ ಲೈಂಗಿಕ ಆರೋಪದ ಮೇರೆಗೆ ಶ್ರೀಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ವರದಿಯೂ ಕೂಡ ಈಗಾಗಲೇ ಬಂದಿದ್ದು, ಶ್ರೀಗಳಿಗೂ ಹಾಗೂ ಅತ್ಯಾಚಾರ ಪ್ರಕರಣಕ್ಕೂ ಸಂಬಂಧವಿದೆ ಎಂದಿರುವ ವೈದ್ಯರು, ಡಿಎನ್ಎ ಪರೀಕ್ಷೆಯಲ್ಲಿ ರುಜುವಾತಾಗಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರು ಇಂದು ಸಭೆ ನಡೆಸಿದ್ದು, ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಶ್ರೀಗಳ ಶಿಷ್ಯ ವೃಂದ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಶ್ರೀಗಳು ಪೀಠ ತ್ಯಾಗ ಮಾಡುವುದಿಲ್ಲ ಎಂದಿದ್ದಾರೆ. 
 

ವೆಬ್ದುನಿಯಾವನ್ನು ಓದಿ