"ತಲೆದಿಂಬು" ಪ್ರಾಂಶುಪಾಲರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

ಬುಧವಾರ, 23 ಜುಲೈ 2014 (12:20 IST)
ಬೆಂಗಳೂರಿನ ಆನೇಕಲ್  ವಸತಿ ಶಾಲೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಾಲಾ ಪ್ರಾಂಶುಪಾಲನ ಭಯಾನಕ ಕಥೆಗಳು ಬಯಲಾಗಿದ್ದು, ಅವನು ಸುಮಾರು 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಶಾಲಾ ಆವರಣದಲ್ಲಿ ಮದ್ಯಪಾನ ಮಾಡುತ್ತಿದ್ದ ಈ ಪ್ರಾಂಶುಪಾಲ ವಿಕೃತ ಮನೋಭಾವದ ಕಾಮಿ ಎನ್ನಲಾಗಿದ್ದು,  ವಿದ್ಯಾರ್ಥಿನಿಯರ ತಲೆದಿಂಬು ಕೇಳುತ್ತಿದ್ದ ಮತ್ತು ಅವರು ಸ್ನಾನಮಾಡುವಾಗ ಕದ್ದು ನೋಡುತ್ತಿದ್ದ. 
 
 ಆನೇಕಲ್ ತಾಲೂಕಿನ ವಸತಿ ಶಾಲೆಯ ವಿದ್ಯಾರ್ಥಿನಿಯರನ್ನು ಮಕ್ಕಳ ಕಲ್ಯಾಣ ಸಮಿತಿ ಭೇಟಿ ನೀಡಿದಾಗ 52 ವರ್ಷ ವಯಸ್ಸಿನ ಮಲ್ಲಿಕಾರ್ಜುನ ಸ್ವಾಮಿಯ ಭಯಾನಕ ಲೈಂಗಿಕ ಪುರಾಣಗಳನ್ನು ವಿದ್ಯಾರ್ಥಿನಿಯರು ಬಿಚ್ಚಿಟ್ಟರು. ಹಿರಿಯ ವಿದ್ಯಾರ್ಥಿನಿಯರು ತಂಗಿದ್ದ ಕೋಣೆಯ ಚಿಲಕಗಳನ್ನು ತೆಗೆಯುತ್ತಿದ್ದ ಪ್ರಾಂಶುಪಾಲ ಅವರು  ಸ್ನಾನ ಮಾಡುವಾಗ ಅವರ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದ. ಹಾಸ್ಟೆಲ್ ಆವರಣದಲ್ಲಿ ಮದ್ಯಪಾನ ಮಾಡುತ್ತಿದ್ದ ದೃಶ್ಯಗಳನ್ನು ಟಿವಿ ವಾಹಿನಿಗಳು ಪ್ರಸಾರ ಮಾಡಿದ ಬಳಿಕ ಸ್ವಾಮಿಯನ್ನು ಬಂಧಿಸಲಾಗಿತ್ತು.

ಬಾಲಕಿಯರು ಮಲಗುತ್ತಿದ್ದ ತಲೆದಿಂಬುಗಳನ್ನು ಕೇಳುತ್ತಿದ್ದ ಪ್ರಾಂಶುಪಾಲ ಅದರ ಬಳಕೆಯಿಂದ ಕನಸುಗಳು ಬೀಳುತ್ತದೆಂದು ಹೇಳುತ್ತಿದ್ದ. ತಾವು ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದಾಗ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಅವರ ಮನವೊಲಿಸಿದ ನಂತರ ಎಲ್ಲಾ ವಿಷಯವನ್ನು ಬಾಯಿಬಿಟ್ಟರು ಎಂದು ಸಿಡಬ್ಲ್ಯುಸಿ ಸದಸ್ಯರು ಹೇಳಿದ್ದಾರೆ. ಮಲ್ಲಿಕಾರ್ಜುನ 15 ವರ್ಷ ವಯಸ್ಸಿನ ಬಾಲಕಿಯನ್ನು ಮತ್ತು ಅವಳ ಸ್ನೇಹಿತೆಯರನ್ನು ಅಸಹಜವಾಗಿ ಸ್ಪರ್ಶಿಸುತ್ತಿದ್ದ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದ. ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲವೆಂದು ಹೇಳಲಾಗಿದೆ. 

ವೆಬ್ದುನಿಯಾವನ್ನು ಓದಿ