ಜೆಡಿಎಸ್ ಕಾರ್ಪೊರೇಟರ್ ಹೇಮಾವತಿ ಬಿಬಿಎಂಪಿಯ ನೂತನ ಉಪ ಮೇಯರ್ ?!

ಗುರುವಾರ, 3 ಸೆಪ್ಟಂಬರ್ 2015 (10:30 IST)
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಬಿಬಿಎಂಪಿ ಗದ್ದುಗೆ ಏರುವುದು ಖಚಿತವಾಗಿರುವ ಪರಿಣಾಮ ಈಗಾಗಲೇ ಮೇಯರ್ ಉಪ ಮೇಯರ್ ಸ್ಥಾನಗಳನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಗುಲ್ಲು ಹರಿದಾಡುತ್ತಿದ್ದು, ಉಪ ಮೇಯರ್ ಪಟ್ಟವನ್ನು ವೃಷಭಾವತಿ ನಗರದ ಜೆಡಿಎಸ್ ಕಾರ್ಪೊರೇಟರ್ ಹೇಮಾವತಿ ಅವರಿಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
 
ಹೇಮಾವತಿ ಅವರು ಮಹಾಲಕ್ಷ್ಮಿ ಲೇಔಟ್‌ನ ಜೆಡಿಎಸ್ ಶಾಸಕ ಕೆ.ಗೋಪಾಲಯ್ಯ ಅವರ ಪತ್ನಿಯಾಗಿದ್ದು, ವೃಷಭಾವತಿ ನಗರ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದಾರೆ. ಅಲ್ಲದೆ ಜೆಡಿಎಸ್ 14 ಸ್ಥಾನಗಳನ್ನು ಜಯ ಸಾಧಿಸುವಲ್ಲಿ ಶಾಸಕ ಗೋಪಾಲಯ್ಯ ಕೂಡ ಸಾಕಷ್ಟು ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಹೇಮಾವತಿ ಅವರಿಗೆ ಉಪ ಮೇಯರ್ ಸ್ಥಾನ ನೀಡುವುದು ಸೂಕ್ತ ಎಂದು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. 
 
ಇನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸಂಬಂಧ ನಿನ್ನೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮಾತುಕತೆ ನಡೆಸಿ ಅಧಿಕಾರ ಹಂಚಿಕೆ ಸಂಬಂಧ ವಿಸ್ತೃತವಾಗಿ ಚರ್ಚಿಸಿದ್ದರು. ಈ ವೇಳೆ ದೇವೇಗೌಡರು ಉಪ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ನೀಡಬೇಕೆಂಬ ಷರತ್ತನ್ನು ವಿಧಿಸಿದ್ದರು. ಇದಕ್ಕೆ ಕಾಂಗ್ರೆಸ್ ಕೂಡ ಒಪ್ಪಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂಬುದಾಗಿ ಜೆಡಿಎಸ್ ಮೂಲಗಳು ತಿಳಿಸಿವೆ.  

ವೆಬ್ದುನಿಯಾವನ್ನು ಓದಿ