ರೈತರಿಗೆ ಕಿರುಕುಳ ಆರೋಪ: ಬಡ್ಡಿ ವ್ಯವಹಾರಸ್ಥನ ಬಂಧನ

ಶನಿವಾರ, 4 ಜುಲೈ 2015 (18:21 IST)
ಕಾನೂನು ಬಾಹಿರವಾಗಿ ಬಡ್ಡಿ ವ್ಯವಹಾರ ನಡೆಸುತ್ತಾ ರೈತರಿಗೆ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಹಿನ್ನೆಲೆಯಲ್ಲಿ ಪೊಲೀಸರು ಬಡ್ಡಿ ವ್ಯವಹಾರಸ್ಥರೋರ್ವರನ್ನು ಇಂದು ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಡಿಗನವಿಲೆ ಗ್ರಾಮದಲ್ಲಿ ಬಂಧಿಸಿದ್ದಾರೆ. 
 
ಬಂಧಿತ ವ್ಯಕ್ತಿಯನ್ನು ಸಿದ್ದಲಿಂಗಸ್ವಾಮಿ(45) ಎಂದು ಹೇಳಲಾಗಿದ್ದು, ಪೂರ್ಣಾವಧಿಯ ಬಡ್ಡಿ ವ್ಯವಹಾರಸ್ಥ ಎಂದು ಹೇಳಲಾಗಿದೆ.  
 
ಈತ ರೈತರಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಹಣ ಪಾವತಿಸಿ ನಿಗದಿತ ವೇಳೆಗೆ ನೀಡಲಿಲ್ಲ ಎಂದಾದಲ್ಲಿ ತೀವ್ರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಿರುಕುಳ ತಾಳಲಾರದೆ ಈತನ ವಿರುದ್ಧ ಹಣ ಪಡೆದಿದ್ದ ನಾಗಗೊಂಡನಹಳ್ಳಿಯ ರೈತ ಪ್ರಸಾದ್ ಎಂಬುವವರು ಬಂಡಿಗನವಿಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದಲಿಂಗಸ್ವಾಮಿ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು 200ಕ್ಕೂ ಅಧಿಕ ಖಾಲಿ ಚೆಕ್‌ಗಳನ್ನು ವಶವಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. 
 
ಈ ಕಾರ್ಯಾಚರಣೆಯು ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಆರೋಪಿಯ ಜೊತೆಗೆ ಚೆಕ್ ಹಾಗೂ ಇನ್ನಿತರೆ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.  
 
ರಾಜ್ಯದಲ್ಲಿ ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯನವರು ರೈತರಿಗೆ ಙಣ ನೀಡುವಂತೆ ಕಿರುಕುಳ ನೀಡುವ ಖಾಸಗಿ ವ್ಯವಹಾರಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ವ್ಯವಹಾರಸ್ಥ ಸಿದ್ದಲಿಂಗಸ್ವಾಮಿಯನ್ನು ಇಂದು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ