ಕಾಂಗ್ರೆಸ್ ಹೈಕಮಾಂಡ್ ಆದೇಶಕ್ಕೆ ಕ್ಯಾರೆ ಎನ್ನದ ಸಿದ್ದರಾಮಯ್ಯ

ಗುರುವಾರ, 21 ಆಗಸ್ಟ್ 2014 (14:59 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳಬಾರದೆಂದು ಕಾಂಗ್ರೆಸ್ ಹೈಕಮಾಂಡ್ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ ಕ್ಯಾರೇ ಎನ್ನುತ್ತಿಲ್ಲ. ''ಯಾರೋ ಹೇಳಿದರೆಂದು ನಾನು ಅದನ್ನು ಅನುಸರಿಸಲು ಆಗುವುದಿಲ್ಲ. ಶಿಷ್ಟಾಚಾರದ ಪ್ರಕಾರ ನಾನು ನಡೆದುಕೊಳ್ಳಬೇಕು" ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಅವರ ಹೇಳಿಕೆ ಕಾಂಗ್ರೆಸ್‌ ಹೈಕಮಾಂಡನ್ನು ಮುಜುಗರಕ್ಕೆ ಈಡುಮಾಡಿದ್ದು, ಬಿಜೆಪಿಗೆ ಒಳ್ಳೆಯ ಅಸ್ತ್ರವಾಗಿ ಸಿಕ್ಕಿದೆ. ನಾಗ್ಪುರದಲ್ಲಿ ಮೋದಿ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಪ್ರಥ್ವಿರಾಜ್ ಚವಾಣ್ ತಪ್ಪಿಸಿಕೊಂಡಿದ್ದರಿಂದ ಬಿಜೆಪಿ ವಾಗ್ದಾಳಿ ಮಾಡಿತ್ತು. ಪ್ರಧಾನಿ ಮೋದಿ ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ  ಮಹಾರಾಷ್ಟ್ರ ಮತ್ತು ಹರ್ಯಾಣ ಮುಖ್ಯಮಂತ್ರಿಗಳು ಪೇಚಿನ ಕ್ಷಣಗಳನ್ನು ಎದುರಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಪ್ರಧಾನಿ ಜೊತೆ ವೇದಿಕೆ ಹಂಚಿಕೊಳ್ಳಬೇಡಿ ಎಂದು ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಕರೆ ನೀಡಿತ್ತು. ನಮ್ಮ ಮುಖಂಡರನ್ನು ಪೇಚಿಗೆ ಸಿಕ್ಕಿಸುವುದು ಬಿಜೆಪಿಯ ಒಳಸಂಚು ಎಂದು ಕಾಂಗ್ರೆಸ್ ತಿಳಿಸಿತ್ತು. ಮೋದಿ ಸರ್ವಾಧಿಕಾರಿ ಮನಸ್ಥಿತಿ ಹೊಂದಿದ್ದಾರೆಂಬ ಅನುಮಾನ ಈಗ ನಿಜವಾಗುತ್ತಿದೆ.

 ಪ್ರಧಾನಮಂತ್ರಿ ಉಪಸ್ಥಿತರಿದ್ದ ಯಾವುದೇ ಸಮಾರಂಭದಲ್ಲಿ ಇಲ್ಲಿಯವರೆಗೆ ಯಾವುದೇ ಮುಖ್ಯಮಂತ್ರಿಗೆ ಅವಮಾನವಾಗಿರಲಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ. ಮೋದಿ ಬೆಂಬಲಿಗರು ತೊಂದರೆ ಮಾಡಿದಾಗ, ಪ್ರಧಾನಿ ಒಂದೇ ಒಂದು ಪದವನ್ನು ಉಚ್ಚರಿಸಲಿಲ್ಲ.ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದ್ದರು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ವಕ್ತಾರ ಹೇಳಿದ್ದರು. 

ವೆಬ್ದುನಿಯಾವನ್ನು ಓದಿ