ಸೋಮಾರಿ ಸಚಿವರ ವಿರುದ್ಧ ಕ್ರಮ: ಹೈಕಮಾಂಡ್ ಎಚ್ಚರಿಕೆ

ಗುರುವಾರ, 28 ಆಗಸ್ಟ್ 2014 (17:43 IST)
ಪಕ್ಷದ ಆದೇಶ ನಿರ್ಲಕ್ಷಿಸಿದ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
 
ಮಂಗಳವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ಸಂದೇಶ ನೀಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಕಚೇರಿಗೆ ಮಾಸಿಕ ಭೇಟಿ ನೀಡದ ಸಚಿವರ ಹಾಜರಿ ಪುಸ್ತಕವನ್ನು ದೆಹಲಿಗೆ ಕೊಂಡೊಯ್ದಿದ್ದಾರೆ.
 
ಇದು ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದು, ಅಧಿಕಾರ ಸಿಕ್ಕಿದೆ ಎಂದು ಪಕ್ಷದ ಆದೇಶ ಮತ್ತು ಕೆಲಸವನ್ನು ಮರೆಯುವ ಸಚಿವರ ಬಗ್ಗೆ ವಿವರ ಕೊಡಿ ಎಂದು ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ದಿಗ್ವಿಜಯ್ ಮಾಹಿತಿ ಕೋರಿದ್ದಾರೆ.
 
ಏನಿದು ವಿವಾದ?: ಪ್ರದೇಶ ಕಾಂಗ್ರೆಸ್ ಕಚೇರಿಗೆ ಪ್ರತಿ ತಿಂಗಳು ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಕೇಳಬೇಕು. ಜತೆಗೆ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಗೆ ಕಡ್ಡಾಯ ಭೇಟಿ ನೀಡಬೇಕು. ಪಕ್ಷ ಮತ್ತು ಸರ್ಕಾರದ ಮಧ್ಯೆ ಸಂಪರ್ಕ ಸಾಧಿಸುವುದಕ್ಕೆ ಇಂಥ ಸೌಹಾರ್ದ ಸಂಬಂಧ ಅಗತ್ಯ ಎಂದು ಎಐಸಿಸಿ ಸೂಚನೆ ಮೇರೆಗೆ ಕೆಪಿಸಿಸಿ ಆದೇಶ ನೀಡಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ಆರಂಭಿಕ ದಿನಗಳಲ್ಲಿ ಮಾತ್ರ ಕೆಲವೇ ಸಚಿವರು ಈ ಆದೇಶಕ್ಕೆ ಮನ್ನಣೆ ನೀಡಿದ್ದರು.
 
ದಿನಕಳೆದಂತೆ ಸಚಿವರ ಕೆಪಿಸಿಸಿ ಸೂಚನೆಯನ್ನೇ ಮರೆತುಬಿಟ್ಟರು. ಇತ್ತೀಚೆಗೆ ಯಾವುದೇ ಸಚಿವರು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿಯೇ ಇರಲಿಲ್ಲ. ಮಂಗಳವಾರ ನಡೆದ ಸಭೆಯಲ್ಲಿ ದಿಗ್ವಿಜಯ್ ಸಿಂಗ್ ಅವರೇ ಈ ವಿಚಾರ ಪ್ರಸ್ತಾಪಿಸಿದರು. ಮಾತ್ರವಲ್ಲ, ಈ ಕ್ಷಣಕ್ಕೆ ನನಗೆ ಸಚಿವರ ಭೇಟಿ ವಿವರ ಕೊಡಿ ಎಂದು ಪರಮೇಶ್ವರ್ ಅವರ ಬಳಿ ಕೇಳಿದರು. ಸಚಿವರ ಇದುವರೆಗೆ ಭೇಟಿ ನೀಡಿರುವ ಬಗ್ಗೆ ದಾಖಲೆ ಏನಿಗೆ ಎಂದು ಪ್ರಶ್ನಿಸಿದಾಗ ಪ್ರದೇಶ ಕಾಂಗ್ರೆಸ್ ಕಚೇರಿ ಸಿದ್ಧಪಡಿಸಿದ್ದ ಹಾಜರಿ ಪುಸ್ತಕವನ್ನು ಅವರ ಮುಂದೆ ಹಾಜರುಪಡಿಸಲಾಯಿತು.
 
ಆದರೆ ಆ ಪಟ್ಟಿಯಲ್ಲಿರುವ ಸಹಿ ಪ್ರಮಾಣ ನೋಡಿ ದಂಗಾದ ದಿಗ್ವಿಜಯ್ ಸಿಂಗ್ ಪಕ್ಷದ ಸೂಚನೆ ಮೀರುವುದು ಗಂಭೀರ ಪ್ರಮಾದ. ಇದನ್ನು ಲಘವಾಗಿ ಪರಿಗಣಿಸುವಂತಿಲ್ಲ. ಈ ಹಾಜರಿ ಪಟ್ಟಿಯ ಝೇರಾಕ್ಸ್ ಪ್ರತಿಯನ್ನು ನೀಡಿ. ನಾನು ಇದನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ನಕಲು ಪ್ರತಿ ಪಡೆದಿರುವುದು ಮಾತ್ರವಲ್ಲ, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಚಿವರು ಎಷ್ಟು ಬಾರಿ ಭೇಟಿ ನೀಡಿದ್ದಾರೆಂಬ ವಿವರವನ್ನು ಹಾಜರಿ ಪಟ್ಟಿ ಸಮೇತ ದೆಹಲಿಗೆ ಕಳುಹಿಸಿಕೊಡುವಂತೆ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ