ಹಿರೇಮಠ್ ರಾಜ್ಯಪಾಲರಲ್ಲ, ರಾಷ್ಟ್ರಪತಿಗಳೂ ಅಲ್ಲ: ಜಾರ್ಜ್ ಲೇವಡಿ

ಶನಿವಾರ, 3 ಅಕ್ಟೋಬರ್ 2015 (17:40 IST)
ಹಿರೇಮಠ್ ಅವರು ನಮ್ಮ ರಾಜ್ಯದ ರಾಜ್ಯಪಾಲರಲ್ಲ ಅಥವಾ ರಾಷ್ಟ್ರಪತಿಗಳೂ ಅಲ್ಲ. ಹೀಗಿರುವಾಗ ನಾನು ಅವರ ಪ್ರಶ್ನೆಗಳಿಗೆ ಏಕೆ ಉತ್ತರಿಸಬೇಕು, ಉತ್ತರಿಸಲಾರೆ ಎನ್ನುವ ಮೂಲಕ ಮಾಧ್ಯಮಗಳ ಎದುರು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಅವರ ವಿರುದ್ಧ ಇಂದು ಕೆಂಡಾಮಂಡಲವಾದರು.   
 
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ನಾಯಕರೂ ಕಳಂಕಿತರಾಗಿದ್ದು, ಐವರು ಸಚಿವರನ್ನು ಮನೆಗೆ ಕಳುಹಿಸಿ ಎಂದು ನಿಮ್ಮ ಹೆಸರನ್ನೂ ಕೂಡ ಹಿರೇಮಠ್ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿರೇಮಠ್ ರಾಜ್ಯದಲ್ಲಿ 6.5 ಕೋಟಿ ಜನರಿರುವಂತೆ ಓರ್ವ ಸಾಮಾನ್ಯ ವ್ಯಕ್ತಿ ಅಷ್ಟೇ. ಅವರು ರಾಜ್ಯಪಾಲರೂ ಅಲ್ಲ, ರಾಷ್ಟ್ರಪತಿಯೂ ಅಲ್ಲ. ಅಲ್ಲದೆ ನನ್ನ ವಿರುದ್ಧ ಹೇಳಿಕೆ ನೀಡದಂತೆ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಹೀಗಿರುವಾಗ ಅವರು ಕೋರ್ಟ್ ಆದೇಶವನ್ನೂ ಪಾಲಿಸದೇ ನನ್ನ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಹಾಗಾಗಿ ನಾನು ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಾರೆ ಎಂದರು.
 
ಇನ್ನು ನಿನ್ನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಿನ್ನೆ ಸಚಿವರ ವಿರುದ್ಧ ಪ್ರತಿಕ್ರಿಯಿಸಿದ್ದ ಹಿರೇಮಠ್, ರಾಜ್ಯ ಸರ್ಕಾರದ ಪ್ರಸ್ತುತ ಸಂಪುಟದಲ್ಲಿರುವ ಐವರು ಸಚಿವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರೇ ನಮಗೆ ಧೈರ್ಯವಿದ್ದಲ್ಲಿ ಅವರನ್ನು ಕೂಡಲೇ ಮನೆಗೋಡಿಸಿ. ಸಂತೋಷ್ ಲಾಡ್ ಇಲಿಯಾದರೆ ಇವರೆಲ್ಲರೂ ಹೆಗ್ಗಣಗಳು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಉತ್ತರಿಸಲು ನಿರಾಕರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ