ಹಿಟ್ ಅಂಡ್ ರನ್ ಪ್ರಕರಣ: ಬಡವರನ್ನು ನಾಯಿಗೆ ಹೋಲಿಸಿದ ಕೀಚಕ ಗಾಯಕ

ಬುಧವಾರ, 6 ಮೇ 2015 (15:40 IST)
ನಟ ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಗಾಯಕ ಅಭಿಜಿತ್ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ರಸ್ತೆ ಹಾಗೂ ಫೂಟ್‌ಪಾತ್‌ಗಳನ್ನು ನಿರ್ಮಿಸಿರುವುದು ಬಡವರು ನಾಯಿಯಂತೆ ಮಲಗಲು ಅಲ್ಲ, ಬದಲಾಗಿ ಕಾರು ಚಲಾಯಿಸಲು ಎನ್ನುವ ಮೂಲಕ ಬಡವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.  
 
ಟ್ವಿಟ್ಟರ್‌ನಲ್ಲಿ ನಟ ಸಲ್ಮಾನ್ ಅವರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಯತ್ನಿಸಿರುವ ಗಾಯಕ ಅಭಿಜಿತ್, ಬಡವರನ್ನು ನಾಯಿಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಹಾಗೂ ಫೂಟ್‌ಪಾತ್‌ಗಳನ್ನು ನಿರ್ಮಿಸುವುದು ಬಡವರು ನಾಯಿಯಂತೆ ಮಲಗಲು ಅಲ್ಲ, ಬದಲಾಗಿ ಕಾರು ಚಲಾಯಿಸಲು. ಈ ಪ್ರಕರಣದಲ್ಲಿ ಕುಡಿದು ಕಾರು ಚಲಾಯಿಸಿರುವುದು ಅಥವಾ ಚಾಲಕನ ತಪ್ಪಿಲ್ಲ. 
 
ರಸ್ತೆಯಲ್ಲಿ ಮಲಗುವ ಮೂಲಕ ನಾಯಿಯಂತೆ ಬಾಳು ನಡೆಸುವವರು ನಾಯಿಯಂತೆಯೇ ಸಾಯುತ್ತಾರೆ ಎಂದು ಬಡವರನ್ನು ಕಟುವಾಗಿ ಟೀಕಿಸಿದ್ದಾರೆ. ಜೊತೆಗೆ ಚಿತ್ರ ರಂಗದ ಸ್ನೇಹಿತರೇ ಮನೆಗಳಿಂದ ಹೊರ ಬನ್ನಿ ಸಲ್ಮಾನ್ ಖಾನ್ ಪರ ಧ್ವನಿ ಎತ್ತಿ. ಇದರಲ್ಲಿ ಸಲ್ಮಾನ್ ಖಾನ್ ಅವರ ತಪ್ಪಿಲ್ಲ ಎಂದೂ ಕೂಡ ಬಾಲಿವುಡ್ ಚಿತ್ರ ಮಂದಿಗೆ ಕರೆ ನೀಡಿದ್ದಾರೆ. ಪ್ರಸ್ತುತ ಇದು ರಾಷ್ಟ್ರದಲ್ಲಿನ ಬಡವರ ಕೆಂಗಣ್ಣಿಗೆ ಗುರಿಯಾಗಿದೆ. 
 
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಲ್ಮಾನ್ ಖಾನ್ ಅವರಿಗೆ ಇಲ್ಲಿನ ಸೆಷನ್ಸ್ ನ್ಯಾಯಾಲಯವು ಇಂದು 5 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ ದಂಡವನ್ನು ವಿಧಿಸಿ ತೀರ್ಪಿತ್ತಿದೆ. ಈ ಹಿನ್ನೆಲೆಯಲ್ಲಿ ಗಾಯಕ ಅಭಿಜಿತ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
 
ಸಲ್ಮಾನ್, ಇಲ್ಲಿನ ಬಾಂದ್ರಾ ಪ್ರದೇಶದಲ್ಲಿ ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದಾಗ ಕಾಲುದಾರಿಯಲ್ಲಿ ಮಲಗಿದ್ದ ಪಾದಚಾರಿಗಳ ಮೇಲೆ ಹತ್ತಿಸಿದ್ದರು. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದರು. ಈ ಘಟನೆಯು ಕಳೆದ 2002ರ ಸೆ. 27 ಮತ್ತು 28ರ ಮಧ್ಯರಾತ್ರಿಯಲ್ಲಿ ನಡೆದಿತ್ತು. ಆದ್ದರಿಂದ ಭಾರತೀಯ ದಂಡ ಸಂಹಿತೆ 304/2ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ಪ್ರಕರಣವನ್ನು ಉದ್ದೇಶ ರಹಿತ ಮಾನವ ಹತ್ಯೆ ಎಂದು ಪರಿಗಣಿಸಿ ಇಂದು ಶಿಕ್ಷೆ ಪ್ರಕಟಿಸಿದೆ. 

ವೆಬ್ದುನಿಯಾವನ್ನು ಓದಿ