ಬಯಲಾದ ಮಾಜಿ ಗಗನಸಖಿ ಕೊಲೆ ರಹಸ್ಯ

ಶುಕ್ರವಾರ, 24 ಏಪ್ರಿಲ್ 2015 (09:40 IST)
ಕಳೆದ ಭಾನುವಾರ ರಾತ್ರಿ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಮಾಜಿ ಗಗನ ಸಖಿ ಸಾವಿನ ರಹಸ್ಯ ಬಯಲಾಗಿದ್ದು ಆಕೆಯ ಪತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ತಾನು ಹೊಟೆಲ್‌ನಿಂದ ತಂದಿದ್ದ ಬಿರಿಯಾನಿಯನ್ನು ಪತ್ನಿ ಬಡಿಸಲಿಲ್ಲವೆಂಬ ಕಾರಣಕ್ಕೆ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಪತಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. 

ಕಳೆದ ಎಪ್ರಿಲ್ 20 ರಂದು ಈ ಘಟನೆ ನಡೆದಿದ್ದು, ನಿಮ್ಮ ಮಗಳು ಉಸಿರಾಡುತ್ತಿಲ್ಲವೆಂದು ರೀತು ಪತಿ ಸಚಿನ್ ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದ. ಅವರು ಬಂದು ನೋಡಲಾಗಿ ಆಕೆ ಮೃತ ಪಟ್ಟಿರುವುದು ತಿಳಿದು ಬಂದಿತ್ತು. ಆಕೆಯ ಮೈಮೇಲೆ ಗಾಯದ ಗುರುತುಗಳು ಸಹ ಇದ್ದವು.
 
ಈ ಸಾವಿಗೆ ಆಕೆಯ ಪತಿಯೇ ಕಾರಣವಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದ್ದು ರೀತು ಪತಿಯೇ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದಿರುವುದು ಸಾಬೀತಾಗಿದೆ. ಈ ಕೊಲೆಗೆ ಆತನ ಸ್ನೇಹಿತ ರಾಕೇಶ್ ಕೂಡ ಸಹಾಯ ಮಾಡಿದ್ದಾನೆಂದು ಹೇಳಲಾಗುತ್ತಿದೆ.
 
"ನಾನು ಹೊಟೆಲ್‌ನಿಂದ ತಂದಿದ್ದ ಬಿರಿಯಾನಿಯನ್ನು ಬಡಿಸಲು ಪತ್ನಿ ತಡ ಮಾಡಿದಳು. ನನ್ನ ಸ್ನೇಹಿತನ ಮುಂದೆ ಅವಳು ನನಗೆ ಅಪಮಾನ ಮಾಡಿದಳು ಎಂಬ ಕಾರಣಕ್ಕೆ ಕೋಪಗೊಂಡು ತಲೆದಿಂಬಿನಿಂದ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದೆ," ಎಂದು ವಿಚಾರಣೆ ವೇಳೆ ಸಚಿನ್ ಬಾಯ್ಬಿಟ್ಟಿದ್ದಾನೆ. 
 
ತನ್ನ ಸ್ನೇಹಿತ ರಾಕೇಶ್ ಜತೆ ಮದ್ಯ ಸೇವಿಸಿ ಮನೆಗೆ ಬಂದಿದ್ದ ಸಚಿನ್ ಪತ್ನಿಯ ಜತೆ ವಾಗ್ವಾದಕ್ಕಿಳಿದು ಆಕೆಯ ತಲೆಯನ್ನು ಗೋಡೆಗೆ ಚಚ್ಚಿ, ಮನಬಂದಂತೆ ಥಳಿಸಿ ಕೊನೆಗೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 
 
ಮೂಲತಃ ಜಾರ‌ಖಂಡ್ ಮೂಲದವಳಾದ ರೀತು ಪಂಜಾಬ್ ಮೂಲದ ಸಚಿನ್‌ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕಳೆದ 18 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರಿಗೆ 5 ತಿಂಗಳ ಗಂಡು ಮಗುವಿದೆ. ಸದಾ ಪತ್ನಿಯನ್ನು ಹಿಂಸಿಸುತ್ತಿದ್ದ ಸಚಿನ್ ಆಕೆ ಮೇಲೆ ಸಂಶಯವನ್ನು ವ್ಯಕ್ತಪಡಿಸುತ್ತಿದ್ದ ಮತ್ತು ವರದಕ್ಷಿಣೆ ತರುವಂತೆ ಕಾಡಿಸುತ್ತಿದ್ದ. ಆಕೆ 9 ತಿಂಗಳ ತುಂಬು ಗರ್ಭಿಣಿಯಾಗಿದ್ದಾಗಲೂ ಆಕೆಯ ಮೇಲೆ ಆತ ವೈವಾಹಿಕ ಅತ್ಯಾಚಾರ ನಡೆಸುತ್ತಿದ್ದ. ಆಕೆ ಡೆಲಿವರಿ ಆಗುವ ಕೆಲ ದಿನಗಳ ಹಿಂದೆ ತಂದೆ-ತಾಯಿಗಳ ಮುಂದೆ ಕೂಡ ಆತ ಹಲ್ಲೆ ನಡೆಸಿದ್ದ. ಗಂಡನ ಸಂಶಯ ಸ್ವಭಾವನನ್ನು ತಾಳಲಾದರೇ ರೀತು ಗಗನಸಖಿ ಕೆಲಸವನ್ನು ಕೂಡ ತ್ಯಜಿಸಿದ್ದಳು ಎಂದು ಆಕೆಯ ಸಹೋದರಿ ಹೇಳಿಕೊಂಡಿದ್ದಾಳೆ.
 
ಐಪಿಸಿಯ ವಿವಿಧ ವಿಭಾಗಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸಚಿನ್ ಮತ್ತು ಆತನ ಸ್ನೇಹಿತ ರಾಕೇಶ್ ಕುಮಾರ್‌ನನ್ನು ಬಂಧಿಸಿದ್ದು, ಪರಾರಿಯಾಗಿರುವ ಸಚಿನ್ ತಂದೆ- ತಾಯಿ ರಮೇಶ್ ಉಪ್ಪಲ್, ಸೀಮಾ ಉಪ್ಪಲ್, ಮತ್ತು ಸಹೋದರ ನಿತಿನ್ ಉಪ್ಪಲ್ ಅವರಿಗಾಗಿ ಬಲೆ ಬೀಸಿದ್ದಾರೆ. 

ವೆಬ್ದುನಿಯಾವನ್ನು ಓದಿ