ನಾನು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿಲ್ಲ: ಮಥಾಯಿ

ಶುಕ್ರವಾರ, 27 ಮಾರ್ಚ್ 2015 (15:43 IST)
ಜಾಹಿರಾತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಬಿಬಿಎಂಪಿಯ ಜಾಹೀರಾತಿ ವಿಭಾಗದ ಸಹಾಯಕ ಆಯುಕ್ತ ಮಥಾಯಿ ಅವರು ನಾನು  ಸರ್ಕಾರಕ್ಕೆ ಯಾವುದೇ ರೀತಿಯಾಗಿ ತಪ್ಪು ಮಾಹಿತಿ ನೀಡಿಲ್ಲ. ಅಲ್ಲದೆ ಯಾವೊಬ್ಬ ಜನಪ್ರತಿನಿಧಿಗಳ ವಿರುದ್ಧವೂ ದೂರು ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
ಮಾಧ್ಯಮಗಲೊಂದಿಗೆ ಮಾತನಾಡಿದ ಅವರು, ನಾನು ಸುಳ್ಳು ಮಾಹಿತಿ ನೀಡಿದ್ದೇನೆ ಎಂದು ಬಿಬಿಎಂಪಿಯ ಸ್ಥಾಯಿ ಸಮಿತಿ ಆರೋಪಿಸುತ್ತಿದೆ. ಆದರೆ ನಾನು ಯಾವೊಬ್ಬ ಜನಪ್ರತಿನಿಧಿ ವಿರುದ್ಧವೂ ದೂರು ದಾಖಲಿಸಿಲ್ಲ. ಹಾಗೆಯೇ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡಿಲ್ಲ. ನಾನು ನಮ್ಮ ವಿಭಾಗದ ವಲಯ ಜಂಟಿ ಆಯುಕ್ತರಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಅದರಲ್ಲಿ ನನ್ನ ತಪ್ಪಿಲ್ಲ. ಮಾಹಿತಿಯಲ್ಲಿ ತಪ್ಪಿದೆ ಎಂದರೆ ಅದು ಜಂಟಿ ಆಯುಕ್ತರು ನನಗೆ ನೀಡಿರುವ ಮಾಹಿತಿಯೂ ತಪ್ಪೆಂದೇ ಅರ್ಥ ಎಂದರು. 
 
ಬಳಿಕ, ಈ ಹಿಂದೆ ನನ್ನ ಪದವಿಯ ಲೆಟರ್‌ಹೆಡ್‌ನ್ನು ನಕಲು ಮಾಡಲಾಗಿತ್ತು. ಆದ್ದರಿಂದ ಪ್ರಕರಣವನ್ನು ಆಯುಕ್ತರ ಸಲಹೆ ಮೇರೆಗೆ ತಪ್ಪಿತಸ್ಥರನ್ನು ಪತ್ತೆ ಹಚ್ಚುವಂತೆ ಬಿಎಂಟಿಎಫ್ ತನಿಖಾಧಿಕಾರಿಗಳಲ್ಲಿ ದೂರು ದಾಖಲಿಸಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದ ಅವರು, ನಾನು ತಪ್ಪು ಮಾಡಿಲ್ಲ. ಮಾಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಪಾಲಿಕೆ ಆಯುಕ್ತರಿಗಿದ್ದು, ಅವರಿಗೆ ಬಿಟ್ಟಿದ್ದು ಎಂದರು.  
 
ನಿನ್ನೆ ವಿಧಾನಸಭಾ ಕಲಾಪದಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಉದ್ಯಾನ ನಗರಿಯಲ್ಲಿ 1750 ಹೋರ್ಡಿಂಗ್ ಗಳು ಅಕ್ರಮವಾಗಿ ತಲೆ ಎತ್ತಿದ್ದು, ಅವುಗಳಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಆ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸದನದಲ್ಲಿ ಉತ್ತರಿಸಿದ್ದರು.  
 
ಇದೇ ಬೆಳವಣಿಗೆಯಲ್ಲಿ ಅನುಮತಿ ಪಡೆಯದೆ ಸ್ಥಾಯಿ ಸಮಿತಿಯ ಅಧ್ಯಕ್ಷರ ವಿರುದ್ಧ ಮಥಾಯಿ ಅವರು ದೂರು ದಾಖಲಿಸಿದ್ದಾರೆ ಎಂಬ ಆರೋಪವನ್ನು ಸ್ಥಾಯಿ ಸಮಿತಿ ಸದಸ್ಯರು ಮಾಡಿದ್ದರು. ಪರಿಣಾಮ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ನಿನ್ನೆ ಮಂಡಳಿ ಸಭೆ ನಡೆಸಿದ ಸ್ಥಾಯಿ ಸಮಿತಿ ಸದಸ್ಯರು, ಮಥಾಯಿ ಅವರ ವರ್ಗಾವಣೆಗೆ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂಬ ನಿರ್ಧಾರವನ್ನು ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಥಾಯಿ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ