ಮಂಗಳೂರಿನವನಾಗಿದ್ದು ಹೆಮ್ಮೆಯೆನಿಸುತ್ತದೆ: ರವಿ ಶಾಸ್ತ್ರಿ

ಗುರುವಾರ, 18 ಫೆಬ್ರವರಿ 2016 (12:07 IST)
ತಾವು ಮಂಗಳೂರಿನವನಾಗಿದ್ದು  ಹೆಮ್ಮೆಯೆನಿಸುತ್ತದೆ ಎಂದು ಭಾರತದ ಮಾಜಿ ಕ್ರಿಕೆಟರ್ ಮತ್ತು ಟೀಂ ಇಂಡಿಯಾದ ಉಸ್ತುವಾರಿ ನಿರ್ದೇಶಕ ರವಿ ಶಾಸ್ತ್ರಿ ಹೇಳಿದ್ದಾರೆ.  ಧಾರ್ಮಿಕ ನಂಬಿಕೆಯ ಕಾರಣದಿಂದ ತವರು ಪಟ್ಟಣದ ಜತೆ ಸಂಬಂಧ ಸುಧಾರಿಸಿದ್ದು, ಕಳೆದ ಏಳು ವರ್ಷಗಳಿಂದ ಮಂಗಳೂರಿಗೆ ಭೇಟಿ ನೀಡುತ್ತಿದ್ದೇನೆ ಎಂದು ರವಿ ಶಾಸ್ತ್ರಿ ಮಂಗಳೂರಿನ ಜತೆ ತಮ್ಮ ಬಾಂಧವ್ಯವನ್ನು ಬಿಚ್ಟಿಟ್ಟರು.
 
ಕಾರ್ಕಳ ಎರ್ಲಪ್ಪಾಡಿ ಗೋವಿಂದೂರು ಕರವಾಲು ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜತೆ ಅವರು ಮಾತನಾಡುತ್ತಿದ್ದರು. ರವಿಶಾಸ್ತ್ರಿಯ ಕುಟುಂಬ ಪ್ರಾರ್ಥನೆ ಸಲ್ಲಿಸುತ್ತಿರುವ ಐತಿಹಾಸಿಕ ನಾಗಬನವು ದೇವಸ್ಥಾನದ ಆವರಣದಲ್ಲಿದೆ.
 
ವಿವಾಹವಾಗಿ 18ವರ್ಷಗಳವರೆಗೆ ಶಾಸ್ತ್ರಿಗೆ ಮಕ್ಕಳಾಗಿರಲಿಲ್ಲ. ಈ ಕುರಿತು ಜ್ಯೋತಿಷಿಯೊಬ್ಬರನ್ನು ಕೇಳಲು ಹೋದಾಗ ಅವರ ಕುಟುಂಬದ ದೇವರನ್ನು ಮರೆತಿದ್ದರಿಂದ ಹೀಗಾಗಿದೆ ಎಂದಿದ್ದರು. ಇದಾದ ಬಳಿಕ ರವಿ ಶಾಸ್ತ್ರಿ ಕಾರ್ಕಳ  ಕರವಾಲು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಪ್ರತಿ ವರ್ಷ ದರ್ಶನ ನೀಡುತ್ತಿದ್ದು, ಈ ಭೇಟಿಯ ಫಲವಾಗಿ ಅವರಿಗೆ ಹೆಣ್ಣು ಮಗುವಾಗಿತ್ತು.
 
ರವಿಶಾಸ್ತ್ರಿ ಬುಧವಾರ 9.30ಕ್ಕೆ ದೇವಸ್ಥಾನವನ್ನು ಮುಟ್ಟಿ, ವಿಷ್ಣು ಮೂರ್ತಿ ದೇವರಿಗೆ ಧಾರ್ಮಿಕ ವಿಧಿವಿಧಾನಗಳ ಬಳಿಕ ನಾಗಬನಕ್ಕೆ ಭೇಟಿ ನೀಡಿ ಅರ್ಚಕರಿಂದ ಪ್ರಸಾದ ಸ್ವೀಕರಿಸಿದ್ದರು. 
 

ವೆಬ್ದುನಿಯಾವನ್ನು ಓದಿ