ನನ್ನ ವಿರುದ್ಧ ಅಕ್ರಮವಿದ್ದರೆ ತನಿಖೆಗೆ ಸಿದ್ದವಾಗಿದ್ದೇನೆ: ಗುಡುಗಿದ ಸಿದ್ದರಾಮಯ್ಯ

ಶನಿವಾರ, 26 ಜುಲೈ 2014 (11:37 IST)
ವಿಧಾನಸಭೆಯಲ್ಲಿ ಇಂದು ಕೂಡ ಅರ್ಕಾವತಿ ಬಡಾವಣೆಯ ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ಪ್ರತಿಧ್ವನಿಸಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಬಿಸಿ ಮಾತಿನ ಚಕಮಕಿ ನಡೆಯಿತು. ಅರ್ಕಾವತಿ ಡಿನೋಟಿಫಿಕೇಶನ್ ಕುರಿತು ಚರ್ಚೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವಕಾಶ ನೀಡುತ್ತಿದ್ದಂತೆ ಚರ್ಚೆ ಆರಂಭಿಸಿದ ಜಗದೀಶ್ ಶೆಟ್ಟರ್,  ತಮ್ಮ ಸ್ವಾರ್ಥಕ್ಕಾಗಿ ನೂರಾರು ಎಕರೆ ನಿವೇಶನಗಳನ್ನು ಕಾಂಗ್ರೆಸ್  ಡಿನೋಟಿಫಿಕೇಶನ್ ಮಾಡಿದೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು. ಅರ್ಕಾವತಿ ಬಡಾವಣೆಯಲ್ಲಿ 983 ಎಕರೆ ಡಿನೋಟಿಫಿಕೇಶನ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು. ನನ್ನ ಅವಧಿಯಲ್ಲಿ ಡಿನೋಟಿಫಿಕೇಶನ್ ಮಾಡಿಲ್ಲ ಎಂದು ಶೆಟ್ಟರ್ ಹೇಳಿದರು.

581 ಎಕರೆಯನ್ನು ಯಾರು ಡಿನೋಟಿಫೈ ಮಾಡಿದರು. ಅವರು ತಪ್ಪು ಮಾಡಿಲ್ಲದಿದ್ದರೆ ಸಿಬಿಐಗೆ ವಹಿಸಲು ಹಿಂಜರಿಯುವುದೇಕೆ ಎಂದು ಕಾರವಾಗಿ ಪ್ರಶ್ನಿಸಿದರು.  ಆದರೆ ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ  ಅವರು ಪ್ರಸ್ತಾಪ ಮಾಡಿರುವ ಡಿನೋಟಿಫಿಕೇಷನ್ ಜಮೀನಿನಲ್ಲಿ ಶೆಟ್ಟರ್ ಕಾಲದಲ್ಲಿ 422 ಎಕರೆ ಡಿನೋಟಿಫಿಕೇಷನ್ ಮಾಡಲಾಗಿದೆ. ಯಡಿಯೂರಪ್ಪ ಕಾಲದಲ್ಲಿ 195 ಎಕರೆ ಡಿನೋಟಿಫಿಕೇಶನ್ ಆಗಿದೆ ಎಂದು ಹೇಳಿದರು.

 ಸಿದ್ದರಾಮಯ್ಯ ಮಾತನಾಡುತ್ತಿದ್ದಾಗಲೇ ಜಗದೀಶ್ ಶೆಟ್ಟರ್ ಮಾತಿನ ಚಕಮಕಿಗೆ ಇಳಿದರು.ಇದರಿಂದ ಕೆಂಡಾಮಂಡಲರಾದ ಸಿದ್ದರಾಮಯ್ಯ,  ನಮ್ಮ ಕಾಲದಲ್ಲಿ ಒಂದು ಗುಂಟೆ ಜಮೀನು ಡಿನೋಟಿಫಿಕೇಷನ್ ಮಾಡಿಲ್ಲ. ನನ್ನ ಕುಟುಂಬದ ಆಸ್ತಿಯೇನು,ಜಗದೀಶ್ ಶೆಟ್ಟರ್ ಕುಟುಂಬದ ಆಸ್ತಿಯೇನು ಎಂದು ಪರಿಶೀಲಿಸಿ ನೋಡಲಿ, ನೀವೆಲ್ಲಾ ಭಂಡರು, ಮಾನ ಮರ್ಯಾದೆ ಇಲ್ಲ. ನನ್ನ ವಿರುದ್ಧ ಯಾವುದೇ ಅಕ್ರಮವಿದ್ದರೂ ತನಿಖೆಗೆ ಸಿದ್ದವಾಗಿದ್ದೇನೆ ಎಂದು ಸಿದ್ದರಾಮಯ್ಯ ಏರಿದ ದನಿಯಲ್ಲಿ ಗುಡುಗಿದಾಗ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು. ಗದ್ದಲದಿಂದಾಗಿ ಯಾರ ಮಾತೂ ಕೇಳದಿದ್ದಾಗ ಕಾಗೋಡು ಕಲಾಪವನ್ನು ಮುಂದೂಡಿದರು. 

ವೆಬ್ದುನಿಯಾವನ್ನು ಓದಿ