ಆರೋಪವಿದ್ದರೆ ತೋರಿಸಿ, ಒಂದು ಕ್ಷಣವೂ ಸ್ಥಾನದಲ್ಲಿ ಮುಂದುವರಿಯೋಲ್ಲ : ಸುಭಾಷ್ ಬಿ ಆಡಿ

ಮಂಗಳವಾರ, 24 ನವೆಂಬರ್ 2015 (13:59 IST)
ಕಾಂಗ್ರೆಸ್‌ನ 78 ಶಾಸಕರು ಉಪಲೋಕಾಯುಕ್ತ ಸುಭಾಷ್ ಬಿ ಆಡಿಯನ್ನು ಪದಚ್ಯುತಿಗೊಳಿಸಬೇಕೆಂದು ಸಹಿ ಸಂಗ್ರಹ ಮಾಡಿ ಪ್ರಸ್ತಾಪವನ್ನು ಮಂಡಿಸಿದ್ದಾರೆ. ನ್ಯಾ.ಎಸ್.ಪಿ ಮಜಗೆ ಆರೋಪದ ಹಿನ್ನೆಲೆಯಲ್ಲಿ  ಸಹಿ ಸಂಗ್ರಹ ಮಾಡಲಾಗುತ್ತಿದೆ. ನನ್ನ ಅಧಿಕಾರ ವ್ಯಾಪ್ತಿಯನ್ನು ಅವರು ಅತಿಕ್ರಮಣ ಮಾಡಿದ್ದಾರೆಂದು ಮಜಗೆ ಸುಭಾಷ್ ಬಿ ಆಡಿ ವಿರುದ್ಧ ಆರೋಪಿಸಿದ್ದರು.

 ಈ ಕುರಿತು ಆಡಿಯನ್ನು  ಟಿವಿ ಸುದ್ದಿವಾಹಿನಿಯೊಂದು ಪ್ರಶ್ನಿಸಿದಾಗ ತಾವು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲವೆಂದು   ಸ್ಪಷ್ಟೀಕರಣ ನೀಡಿದ್ದಾರೆ.  ಸಾಕ್ಷಿಗಳೇ ಇಲ್ಲದ ಆರೋಪವನ್ನು ಇಟ್ಟುಕೊಂಡು ಸಹಿ ಸಂಗ್ರಹ ಮಾಡಲಾಗುತ್ತಿದೆ.  ನನ್ನ ವಿರುದ್ಧ ಆರೋಪ ಮಾಡುವ ಮುನ್ನ ಯೋಚಿಸಬೇಕು.  ತಪ್ಪು ಆರೋಪಿಸಿದರೆ ಆಗುವ ತೊಂದರೆ ಬಗ್ಗೆ ಗೊತ್ತಿರಬೇಕು. ಆರೋಪಿಸುವ ಮುನ್ನ ತಿಳಿದುಕೊಂಡು ಮಾತನಾಡಬೇಕು. ನಾನು ತಪ್ಪು ಮಾಡಿದ್ದರೆ ಒಂದು ಕ್ಷಣವೂ ಈ ಸ್ಥಾನದಲ್ಲಿ ಮುಂದುವರಿಯುವುದಿಲ್ಲ. ನಾನು ಎಂದಿಗೂ ಭ್ರಷ್ಟಾಚಾರದ ವಿರುದ್ಧ ಹೋರಾಡಿದವನು. ನನ್ನ ವಿರುದ್ಧ ಯಾವುದೇ ಆರೋಪಗಳಿಗೆ ಆಧಾರವಿಲ್ಲ ಎಂದು ಸುಭಾಷ್ ಬಿ ಆಡಿ ಸಮರ್ಥಿಸಿಕೊಂಡರು. 

 ಒಂದಲ್ಲ ಒಂದು ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ.  ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಕೆಲಸ ಮಾಡಲ್ಲ ಎಂದು ಆಡಿ ಭಾವುಕರಾಗಿ ಹೇಳಿದರು. ಲೋಕಾಯುಕ್ತರ ಗೈರಿನಲ್ಲೂ ಕಾರ್ಯಚಟುವಟಿಕೆಗಳು ನಿಂತಿಲ್ಲ. ನಾವು ನಮ್ಮ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಬೇಕಾದರೆ ಯಾರು ಬೇಕಾದರೂ ಪರೀಕ್ಷೆ ಮಾಡಬಹುದು ಎಂದು ಆಡಿ ಹೇಳಿದರು.  

ವೆಬ್ದುನಿಯಾವನ್ನು ಓದಿ