ನನ್ನ ಜೀವಮಾನದಲ್ಲಿ ಸಿದ್ದರಾಮಯ್ಯರಂತಹ ಸಿಎಂರನ್ನು ನೋಡಿಯೇ ಇಲ್ಲ: ಶಾಸಕ ನಡಹಳ್ಳಿ

ಶುಕ್ರವಾರ, 10 ಏಪ್ರಿಲ್ 2015 (16:17 IST)
ಮುಖ್ಯಮಂತ್ರಿಗಳೇ ಸರ್ಕಾರದ ಅಧೀಕೃತ ದಾಖಲೆಗಳನ್ನು ತಿದ್ದಿ ಅನಧೀಕೃತ ಅಂಕಿ ಅಂಶಗಳನ್ನು ಸೃಷ್ಟಿಸಿ ವಿಧಾನಸಭೆಯಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ನಾನು ಜೀವಮಾನದಲ್ಲಿಯೇ ನೋಡಿಲ್ಲ ಎಂದು ಜಿಲ್ಲೆಯ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎ.ಪಾಟೀಲ್ ನಡಹಳ್ಳಿ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. 
 
ಆಡಳಿತ ಪಕ್ಷದ ಸದಸ್ಯರೇ ಆಗಿರುವ ಶಾಸಕ ನಡಹಳ್ಳಿ, ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯನವರು 2014-15ರಲ್ಲಿ ಶೇ. 16ರಷ್ಟು ಅನುಧಾನ ಬಿಡುಗಡೆಗೊಳಿಸಿದ್ದರು. ಬಳಿಕ ಈ ಸಾಲಿನಲ್ಲಿ ಕೇವಲ ಶೇ.8 ಮಾತ್ರ ಅನುಧಾನ ನೀಡಿದ್ದಾರೆ. ಆದರೆ ಇದನ್ನು ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದಲ್ಲಿ ಅರ್ಧದಷ್ಟು ಕಡಿಮೆ ಇದೆ ಎಂದ ಅವರು, ಅಂದಿನ ಬಿಜೆಪಿ ಸರ್ಕಾರ 2012-13ನೇ ಸಾಲಿನಲ್ಲಿ ಶೇ.19 ಅನುಧಾನ ವಿತರಿಸಿತ್ತು ಎಂದರು. 
 
ಇದೇ ವೇಳೆ, ಸರ್ಕಾರ ನೀಡಿದ್ದ ದಾಖಲೆಗಳನ್ನು ತಿದ್ದಿ ವಿಧಾನಸಭೆಯಲ್ಲಿ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ. ಸರ್ಕಾರವನ್ನು ದಿಕ್ಕು ತಪ್ಪಿಸುವ ಯತ್ನದಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಆದ್ದರಿಂದ ನಾನು ನನ್ನ ಜೀವಮಾನದಲ್ಲಿಯೇ ಇಂತಹ ಮುಖ್ಯಮಂತ್ರಿಗಳನ್ನು ನೋಡಿಲ್ಲ ಎಂದು ಗುಡುಗಿ ಸಿಎಂ ಸಿದ್ದರಾಮಯ್ಯನವರೇ ನೀವು ಕಲಾಪ ಸಂಧರ್ಭದಲ್ಲಿ ನೀವೇ ನೀಡಿದ ಹೇಳಿಕೆಗಳ (ಮಂಡನಾ ಪುಸ್ತಕ)ಪುಸ್ತಕ ನನ್ನ ಬಳಿ ಈಗಲೂ ಇದೆ. ಬನ್ನಿ ತೋರಿಸುತ್ತೇನೆ ನಾನೂ ಕೂಡ ಎಂಎಸ್ಸಿ ಪದವೀದರನಾಗಿದ್ದೇನೆ ಎಂದು ಸವಾಲೆಸೆದರು.  
 
ಬಳಿಕ, ಸರ್ಕಾರದ ಈ ನಡವಳಿಕೆಗಳಿಂದ ನನಗೆ ವೈಯಕ್ತಿಕವಾಗಿ ಬಹಳ ನೋವನ್ನುಂಟಾಗಿದೆ. ಅಲ್ಲದೆ ವೈಯಕ್ತಿಕ ದ್ವೇಷವೇನಾದರೂ ಇದ್ದಲ್ಲಿ ನನ್ನ ಮೇಲೆ ತೀರಿಸಿಕೊಳ್ಳಲಿ. ಆದರೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿರುವ ಕೃಷ್ಣಾ ಕೊಳದ ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿಗಳು ಅನ್ಯಾಯ ಮಾಡಬಾರದು ಎಂದು ಮನವಿ ಮಾಡಿದರು. 

ವೆಬ್ದುನಿಯಾವನ್ನು ಓದಿ