ಸಂಸತ್ ಗಲಾಟೆ: ನನಗೂ ರಾಜೀನಾಮೆ ನೀಡಬೇಕು ಎನ್ನಿಸಿತು ಎಂದ ಎಚ್.ಡಿ.ದೇವೇಗೌಡ

ಶುಕ್ರವಾರ, 16 ಡಿಸೆಂಬರ್ 2016 (19:46 IST)
ನೋಟ್ ಬ್ಯಾನ್ ವಿಚಾರವಾಗಿ ಸಂಸತ್‌ ಕಲಾಪ ಸುಗಮವಾಗಿ ನಡೆಯದೆ ಸಂಪೂರ್ಣ ವಾಶ್‌ಔಟ್ ಆಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.
 
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 21 ದಿನಗಳಿಂದ ನಡೆದ ಚಳಿಗಾಲದ ಅಧಿವೇಶನ ಸಂಪೂರ್ಣ ವ್ಯರ್ಥವಾಗಿದೆ. ಇವರ ಮೇಲೆ ಅವರು, ಅವರ ಮೇಲೆ ಇವರು ಆರೋಪ ಮಾಡುತ್ತಾ ಅಧಿವೇಶನ ವ್ಯರ್ಥ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. 
 
ರಾಜ್ಯಸಭೆ ಕಲಾಪಗಳ ನಡೆಯದಿರುವುದರಿಂದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ನೋವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ನನಗೂ ಬೇಸರವಾಗಿದೆ. ಇದರಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅನ್ನಿಸಿತು ಎಂದು ಹೇಳಿದರು.
 
ನೋಟ್ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಧರಣಿ, ವಾಗ್ವಾದ ಮಾಡುವ ಬದಲು ಸ್ವೀಕರ್ ಅನುಮತಿ ಇಲ್ಲದೆ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಬಹುದಿತ್ತು. ಆದರೆ, ಇದಕ್ಕೆ ಯಾರು ಮುಂದಾಗಲಿಲ್ಲ. ಕಲಾಪ ವ್ಯರ್ಥವಾಗಿದ್ದಕ್ಕೆ ನಾವೆಲ್ಲ ಹೊಣೆಗಾರರೇ ಎಂದು ಅಭಿಪ್ರಾಯಪಟ್ಟರು. 
 
ಏಕಾಏಕಿ 500, 1000 ಮುಖಬೆಲೆಯ ನೋಟ್ ಬ್ಯಾನ್ ಮಾಡಿರುವುದರಿಂದ ಜನಸಾಮಾನ್ಯರಿಗೆ ಉಂಟಾಗಿರುವ ಸಮಸ್ಯೆಗಳ ಕುರಿತು ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ