ದುಬಾರಿ ವಾಚ್ ಸರಕಾರಕ್ಕೆ ನೀಡುತ್ತೇನೆ, ಅದರ ಸಹವಾಸವೇ ಬೇಡ ಎಂದ ಸಿಎಂ ಸಿದ್ದರಾಮಯ್ಯ

ಗುರುವಾರ, 25 ಫೆಬ್ರವರಿ 2016 (17:42 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರಿ ವಿವಾದ ಸೃಷ್ಟಿಸಿದ್ದ ವಾಚ್ ಹಿಂದಿರುವ ಸತ್ಯವನ್ನು ಬಹಿರಂಗಪಡಿಸಿದ್ದು, ಮುಂದೆ ನಾನು ಯಾವತ್ತೂ ಈ ವಾಚ್ ಕಟ್ಟುವುದಿಲ್ಲ ಎಂದು ಘೋಷಿಸಿದ್ದಾರೆ.
 
ಕಳೆದ ಜೂನ್ ತಿಂಗಳಲ್ಲಿ ದುಬೈನಿಂದ ಭಾರತಕ್ಕೆ ಬಂದಿದ್ದ ನನ್ನ ಆತ್ಮಿಯ ಗೆಳೆಯ ಡಾ,ಗಿರೀಶ್ ಚಂದ್ರ ಶರ್ಮಾ, ಒತ್ತಾಯ ಮಾಡಿ ನನಗೆ ವಾಚ್ ಗಿಫ್ಟ್ ಕೊಟ್ಟಿದ್ದರು. 1983 ರಿಂದ ನನ್ನ ಸ್ನೇಹಿತರಾಗಿದ್ದರಿಂದ ಅವರ ಮಾತಿಗೆ ಕಟ್ಟು ಬಿದ್ದು ವಾಚ್ ಪಡೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ.
 
ಕರ್ನಾಟಕವರೇ ಆದ ಗಿರೀಶ್ ದುಬೈನಲ್ಲಿ ವೈದ್ಯ ವೃತ್ತಿಯಲ್ಲಿದ್ದಾರೆ. ನನಗೆ ಒತ್ತಾಯಪೂರ್ವಕವಾಗಿ ವಾಚ್ ಕಟ್ಟಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡಾ ನೀಡಿದ್ದಾರೆ. ಜೂನ್ ತಿಂಗಳಲ್ಲಿ ವಾಚ್ ನನ್ನ ಕೈಗೆ ಬಂದಿದ್ದರಿಂದ ತೆರಿಗೆ ಕಟ್ಟುವ ಸಂದರ್ಭದಲ್ಲಿ ಘೋಷಿಸಿರಲಿಲ್ಲ. ಮುಂದಿನ ಮಾರ್ಚ್ ತಿಂಗಳಲ್ಲಿ ತೆರಿಗೆ ಕಟ್ಟುತ್ತೇನೆ ಎಂದರು.
 
ದುಬಾರಿ ವಾಚ್‌ನ್ನು ರಾಜ್ಯಸರಕಾರಕ್ಕೆ ನೀಡುತ್ತೇನೆ. ನಾನು ವಾಚ್ ಗಿಫ್ಟ್ ಆಗಿ ಪಡೆದಿದ್ದರೂ ಅದರ ತೆರಿಗೆ ಕಟ್ಟುತ್ತೇನೆ. ವಾಚ್ ಸಹವಾಸವೇ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ