ಹಿರೇಮಠ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದೇನೆ: ಶೆಟ್ಟರ್ ಗರಂ

ಸೋಮವಾರ, 5 ಅಕ್ಟೋಬರ್ 2015 (13:14 IST)
ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಅವರ ವಿರುದ್ಧ ಇಂದು ಗುಡುಗಿದ್ದು, ಹಿರೇಮಠ್ ಅವರು ತಮ್ಮ ವಿರುದ್ಧ ಬೇಜವಾಬ್ದಾರಿಯುತವಾದಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಶಾಸಕರಾಗಿರುವ ಸಂತೋಷ್ ಲಾಡ್ ಅವರ ವಿರುದ್ಧ ಈ ಹಿಂದೆ ನಾವು ಹೋರಾಟ ಮಾಡಿದ್ದಕ್ಕೆ ಸಚಿವ ಸ್ಥಾನದಿಂದ ಕೆಳಗಿಳಿದರು. ಬಳಿಕ ಅವರು ಆರೋಪ ಮಾಡಿದರು. ಅಂತೆಯೇ ತಮ್ಮ ವಿರುದ್ಧವೂ ಕೂಡ ಪ್ರಸ್ತುತ ನಾಲ್ಕನೇ ಬಾರಿಗೆ ಆರೋಪ ಮಾಡಿದ್ದಾರೆ. ಆದರೆ ಅವರ ಬಳಿ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಒಂದು ಸಣ್ಣ ದಾಖಲೆಯೂ ಇಲ್ಲ. ಹಾಗಾಗಿ ಇನ್ನು ಮುಂದೆ ತಮ್ಮ ವಿರುದ್ಧ ಹೀಗೆಯೇ ಸುಳ್ಳು ಆರೋಪ ಮಾಡಿದಲ್ಲಿ ನಾನು ಹಿರೇಮಠ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ಆಕ್ರೋಶಭರಿತರಾಗಿ ನುಡಿದರು. 
 
ಇನ್ನು ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಹಿರೇಮಠ್, ಜಗದೀಶ್ ಶೆಟ್ಟರ್ ಅವರು ಖಾಸಗಿ ವ್ಯಕ್ತಿಯೋರ್ವರಿಂದ ಲಂಚ ಪಡೆದು 2012ರಲ್ಲಿ ವೈ.ಭಾಸ್ಕರ್ ರಾವ್ ಅವರನ್ನು ರಾಜ್ಯದ ಮುಖ್ಯ ಲೋಕಾಯುಕ್ತರನ್ನಾಗಿ ನೇಮಿಸಿದ್ದರು. ಆದರೆ ಭಾಸ್ಕರ್ ರಾವ್ ಹುದ್ದೆಗೆ ಅನರ್ಹರಾಗಿದ್ದರು ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಶೆಟ್ಟರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ