ಮಗಳನ್ನೂ ಸೈನ್ಯಕ್ಕೆ ಸೇರಿಸುತ್ತೇನೆ: ಹುತಾತ್ಮ ಕೊಪ್ಪದ್ ಪತ್ನಿ

ಶನಿವಾರ, 13 ಫೆಬ್ರವರಿ 2016 (11:58 IST)
ಪತಿ ಬದುಕಿದ ಸುದ್ದಿ ತಿಳಿದು ದೆಹಲಿಗೆ ಓಡಿದ್ದ ವೀರಯೋಧ ಹನುಮಂತಪ್ಪ ಕೊಪ್ಪದ್ ಪತ್ನಿ ತನ್ನ ಪತಿಯ ಶವದ ಜತೆ ಮರಳುವಂತಾಯಿತು. ತನ್ನ ಪತಿಯನ್ನು ಕಳೆದುಕೊಂಡು ಕೊನೆಯಿಲ್ಲದ ನೋವಿಗೆ ಜಾರಿದ್ದರೂ ತನ್ನ ಪತಿ ಹೇಳಿಕೊಟ್ಟ ಪಾಠವನ್ನು ಮರೆತಿಲ್ಲ. ಈ ನುಂಗಲಾಗದ ದುಃಖದ ನಡುವೆಯೂ ಆಕೆ ತನ್ನ ಮಗಳನ್ನು ಸಹ ಸೈನ್ಯಕ್ಕೆ ಸೇರಿಸುತ್ತೇನೆ ಎಂಬ ದಿಟ್ಟತನದ ಮಾತುಗಳನ್ನಾಡುತ್ತಾಳೆ. 

 
"ನನಗೆ ದೇಶವೆಂದರೆ ತುಂಬಾ ಪ್ರೀತಿ. ನನ್ನ ಪತಿ ನಮ್ಮಮ್ಮನ ತಮ್ಮನಾಗಬೇಕು. ಅವರು ಸೈನಿಕರೆಂದು ಗೊತ್ತಿದ್ದೂ ಸಂತೋಷದಿಂದ ನಾನು ಮಾವನ ಕೈ ಹಿಡಿದಿದ್ದೆ. ನೀನು ಸೈನಿಕನ ಹೆಂಡತಿ. ಎಲ್ಲ ಪರಿಸ್ಥಿತಿಗಳಿಗೂ ಸಿದ್ಧಳಾಗಿರಬೇಕು ಎಂದು ಅವರು ಸದಾ ಧೈರ್ಯ ತುಂಬುತ್ತಿದ್ದರು. ತಾನಿಲ್ಲದೆ ಸಹ ನೀನು ಬದುಕಬೇಕು ಎಂದು ಅವರು ಹೇಳುತ್ತಿದ್ದರು. ಅವರ ಬಯಕೆಯಂತೆ ಅದಕ್ಕೆ ಸಿದ್ಧಳಾಗಿದ್ದೇನೆ. ನಮ್ಮ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿ ಚೆನ್ನಾಗಿ ಓದಿಸಿ ಸೇನೆಗೆ ಸೇರಿಸುವುದೇ ನನ್ನ ಮುಂದಿನ ಜೀವನದ ಉದ್ದೇಶ", ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಜಯಮ್ಮ ಹೇಳಿದ್ದಾರೆ.
 
"ಸಿಯಾಚಿನ್ ಸಂಭವಿಸಿದ ದುರಂತದ ಬಗ್ಗೆ ಕೇಳಿದಾಗ ನಾನು ಕಂಗೆಟ್ಟಿರಲಿಲ್ಲ. ಸೈನಿಕನಾಗಿದ್ದ ನನ್ನ ಪತಿ ಎಲ್ಲವನ್ನು ಎದುರಿಸಲೇ ಬೇಕು ಎಂಬುದು ನನಗೆ ತಿಳಿದಿತ್ತು.
ನನ್ನ ಪತಿ ವೀರಮರಣ ಹೊಂದಿದ್ದಾರೆ", ಎಂದು ಅವರು ಆತ್ಮವಿಶ್ವಾಸದಿಂದ ಬದುಕುವ ಮಾತುಗಳನ್ನಾಡಿದ್ದಾರೆ.
 
ನೀವು ಪತಿಯ ಜತೆ ಕೊನೆಯದಾಗಿ ಮಾತನಾಡಿದ್ದು ಯಾವಾಗ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, "ಸಿಯಾಚಿನ್ ದುರಂತ ನಡೆದ ಒಂದು ದಿನ ಮೊದಲು ಫೆಬ್ರವರಿ 2ರಂದು ಮಗಳಿಗೆ ಆರೋಗ್ಯ ಸರಿ ಇಲ್ಲವೆಂದು ಆಸ್ಪತ್ರೆಗೆ ಕರೆದೊಯ್ದಿದ್ದೆ. ಆ ಸಂದರ್ಭದಲ್ಲಿ ಅವರು ಕರೆ ಮಾಡಿದ್ದರು. ಆದರೆ ನಾನಿದ್ದ ಜಾಗದಲ್ಲಿ ತುಂಬ ಜನರಿದ್ದರಿಂದ ಅವರ ಮಾತುಗಳು ಸ್ಪಷ್ಟವಾಗಿ ಕೇಳಿಸಲಿಲ್ಲ. ಕೊನೆಯ ಸಲವೂ ಅವರ ಜತೆ ಸರಿಯಾಗಿ ಮಾತನಾಡಲಾಗಲಿಲ್ಲ", ಎಂದು ಅವರು ನೋವನ್ನು ವ್ಯಕ್ತ ಪಡಿಸಿದ್ದಾರೆ.
 
ಸದಾ ಅಜ್ಜಿಯ(ಕೊಪ್ಪದ್ ತಾಯಿ) ಬಗ್ಗೆ ಕಾಳಜಿ ವಹಿಸು ಎಂದು ಹೇಳುತ್ತಿರುತ್ತಿದ್ದರು ಎಂದು ಜಯಮ್ಮ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ