ಐಎಎಸ್ ಫಲಿತಾಂಶ ಪ್ರಕಟ: ಕರ್ನಾಟಕದ 56 ಮಂದಿ ಉತ್ತೀರ್ಣ

ಶನಿವಾರ, 4 ಜುಲೈ 2015 (14:24 IST)
ಕೇಂದ್ರ ಲೋಕಸೇವಾ ಆಯೋಗವು 2014ನೇ ಸಾಲಿನ ನಾಗರೀಕ ಸೇವಾ ಪರೀಕ್ಷೆಯ  ಫಲಿತಾಂಶವನ್ನು ಇಂದು ಪ್ರಕಟಿಸಿದ್ದು, ಒಟ್ಟು 1364 ಮಂದಿ ಪರೀಕ್ಷಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 
 
ಮೊದಲ ನಾಲ್ಕು ರ್ಯಾಂಕ್‌ಗಳಲ್ಲಿ ಮಹಿಳಾ ಅಭ್ಯರ್ಥಿಗಳೇ ಜಯ ಸಾಧಿಸಿದ್ದು, ಈ ಮೂಲಕ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ಮೊದಲ ಸ್ಥಾನವನ್ನು ಈರಾ ಸಿಂಘಾಲ್, ಎರಡನೇ ಸ್ಥಾನವನ್ನು ರೇಣು ರಾಜ್, ಮೂರನೇ ಸ್ಥಾನವನ್ನು ನಿಧಿ ಗುಪ್ತಾ ಹಾಗೂ ನಾಲ್ಕನೇ ಸ್ಥಾನವನ್ನು ವಂದನಾ ರಾವ್ ಅವರು ಅಲಂಕರಿಸಿದ್ದಾರೆ.  
 
ಈ ಸಾಲಿನ ಮೊದಲ ಪುರುಷ ಅಭ್ಯರ್ಥಿ ಎನಿಸಿಕೊಂಡಿರುವ ಸುಹರ್ಶ ಭಗತ್ ಎಂಬುವವರು ಸ್ಥಾನ ಪಡೆದಿದ್ದು, ಐದನೇ ಸ್ಥಾನದಲ್ಲಿದ್ದಾರೆ. 6ನೇ ರ್ಯಾಂಕ್‌ನಲ್ಲಿ ಜಾರುಶಿ, ಏಳನೇ ರ್ಯಾಂಕ್‌ನಲ್ಲಿ ಲೋಕ ಬಂಧು, 8ನೇ ರ್ಯಾಂಕ್‌ನಲ್ಲಿ ನಿತೀಶ್, 9ನೇ ರ್ಯಾಂಕ್‌ನಲ್ಲಿ ಆಶಿಶ್ ಕುಮಾರ್ ಹಾಗೂ 10ನೇ ರ್ಯಾಂಕ್‌ನಲ್ಲಿ ಅರವಿಂದ್ ಸಿಂಗ್ ತೇರ್ಗಡೆಯಾಗಿದ್ದಾರೆ. 
 
ಕರ್ನಾಟಕದಿಂದಲೂ ಕೂಡ 56 ಮಂದಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, 8ನೇ ರ್ಯಾಂಕ್ ಪಡೆದಿರುವ ನಿತೀಶ್ ಮೊದಲಿಗರಾಗಿದ್ದಾರೆ. ಇನ್ನು 31 ನೇ ರ್ಯಾಂಕ್‌ನಲ್ಲಿ ಫೌಜಿಯಾ ತನರಮ್ ಹಾಗೂ 36ನೇ ರ್ಯಾಂಕ್‌ನಲ್ಲಿ ಕುಣಿಗಲ್‌ನ ಡಿ.ಕೆ.ಬಾಲಾಜಿ ತೇರ್ಗಡೆಯಾಗಿದ್ದಾರೆ. 
 
ಇನ್ನು ಕರ್ನಾಟದಲ್ಲಿ ತಮ್ಮದೇ ರೀತಿಯ ವಿಭಿನ್ನ ನಾಯಕತ್ವದೊಂದಿಗೆ ಜನತೆಯ ಮನಗೆದ್ದು, ಪ್ರಸ್ತುತ ಕಣ್ಮರೆಯಾಗಿರುವ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರೂ ಕೂಡ 2009ನೇ ಸಾಲಿನಲ್ಲಿ ತೇರ್ಗಡೆ ಹೊಂದಿ 34ನೇ ರ್ಯಾಂಕ್ ಗಳಿಸುವ ಮೂಲಕ ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿಗೆ ಕೀರ್ತಿ ತಂದಿದ್ದರು. ಪ್ರಸ್ತುತ ಇದೇ ತಾಲೂಕಿನ ಮತ್ತೋರ್ವ ಅಭ್ಯರ್ಥಿ ಡಿ.ಕೆ.ಬಾಲಾಜಿ ಉತ್ತೀರ್ಣರಾಗಿದ್ದು, 36ನೇ ರ್ಯಾಂಕ್ ಪಡೆದಿದ್ದಾರೆ. 

ಈ ಸಾಲಿನಲ್ಲಿ 1291 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಕಳೆದ ಏಪ್ರಿಲ್ 9ರಿಂದ ಮೇ 2ರ ವರೆಗೆ ಸಂದರ್ಶನ ನಡೆದಿತ್ತು. ಆದ್ದರಿಂದ ಇಂದು ಫಲಿತಾಂಶ ಪ್ರಕಟಿಸಲಾಗಿದೆ. 

ವೆಬ್ದುನಿಯಾವನ್ನು ಓದಿ