ಮಾಹಿತಿ ಇದ್ದಲ್ಲಿ ಬಹಿರಂಗಪಡಿಸಲಿ: ಹೆಚ್‌ಡಿಕೆಗೆ ಪರಮೇಶ್ವರ್ ಸವಾಲ್

ಗುರುವಾರ, 28 ಮೇ 2015 (15:43 IST)
ಬಹುಕೋಟಿ ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಪದೇ ಪದೇ ಗುಪ್ತ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದನ್ನು ಬಿಟ್ಟು ನೇರವಾಗಿ ಯಾರು ಭಾಗಿಯಾಗಿದ್ದಾರೆ ಎಂದು ಹೇಳಲಿ ನೋಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮೊನ್ನೆಯಷ್ಟೇ ಸುದ್ದಿಗೋಷ್ಠಿ ಕರೆದು ಮಾತನಾಡುತ್ತಿದ್ದು, ಲಾಟರಿ ಹಗರಣದಲ್ಲಿ ಕಾಂಗ್ರೆಸ್ ಪಕ್ಷದ ವಿಧಾನಸಭಾ ಸದಸ್ಯರೋರ್ವರೂ ಭಾಗಿಯಾಗಿದ್ದಾರೆ ಎಂದಿದ್ದಾರೆ. ಆದರೆ ಸಂಪೂರ್ಣ ವಿವರ ನೀಡಿಲ್ಲ. ಆದ್ದರಿಂದ ಇಂತಹ ಗುಪ್ತ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ತಪ್ಪಿತಸ್ಥರಿದ್ದಾರೆ ಎಂಬ ಮಾಹಿತಿ ಅವರಿಗೆ ತಿಳಿದಿದ್ದಲ್ಲಿ ಕೂಡಲೇ ಅದನ್ನು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು. 
 
ಇದೇ ವೇಳೆ, ಅವರು ವಿಧಾನ ಪರಿಷತ್ ಸದಸ್ಯರು ಎಂಬ ಬಗ್ಗೆ ಉಲ್ಲೇಖಿಸಿದ್ದಾರೆ. ಅಂದರೆ ನಾನೂ ಕೂಡ ವಿಧಾನ ಪರಿಷತ್ ಸದಸ್ಯನಾಗಿದ್ದೆ. ಒಂದು ವೇಳೆ ನನ್ನ ಹೆಸರೇ ಇದೆ ಎಂದಾದಲ್ಲಿ ನೇರವಾಗಿ ಹೇಳಲಿ ಎಂದು ಸವಾಲೆಸೆದರು.  
 
ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ ಅವರು, ಪ್ರಕರಣದಲ್ಲಿ ಕೇವಲ ಪೊಲೀಸರೇ ಅಲ್ಲ ರಾಜ್ಯ ಸರ್ಕಾರದ ಓರ್ವ ಸಚಿವರೂ ಕೂಡ ಪ್ರಕರಣದಲ್ಲಿ ಪಾಲುದಾರರಾಗಿದ್ದಾರೆ ಎಂದಿದ್ದರು. ಆದರೆ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಇಂದು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ