10 ಲಕ್ಷ ಕೊಟ್ಟರೆ ವಿಧಾನಸೌಧವನ್ನೂ ಕೂಡ...: ವಿಶ್ವನಾಥ್

ಶುಕ್ರವಾರ, 27 ಮಾರ್ಚ್ 2015 (17:57 IST)
ರಾಜ್ಯದ ಕಾರ್ಯ ನಿರ್ವಹಿಸುತ್ತಿರುವ ಉಪ ನೊಂದಾವಣಾಧಿಕಾರಿಗಳು 10 ಲಕ್ಷ ಲಂಚ ಕೊಟ್ಟಲ್ಲಿ ವಿಧಾನಸೌಧವನ್ನೂ ಮಾರಬಹುದು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಸರ್ಕಾರವನ್ನು ಇಂದು ಆಗ್ರಸಿದ್ದಾರೆ. 
 
ವಿಧಾನಸಭಾ ಕಲಾಪದ ಚರ್ಚಾ ವೇಳೆಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಕಂದಾಯ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ ನೊಂದಾವಣಾಧಿಕಾರಿಗಳು ಕೇವಲ ಲಂಚದ ಗುಂಗಿನಲ್ಲೇ ಮುಳುಗಿದ್ದು, ಪ್ರತಿನಿತ್ಯ ಲಂಚ ಪಡೆಯುತ್ತಿದ್ದಾರೆ. ಪರಿಣಾಮ ಹಲವಾರು ಯಡವಟ್ಟುಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಪರಿತಪಿಸುವಂತಾಗಿದೆ. 
 
ಲಂಚವನ್ನು ಸ್ವೀಕರಿಸುತ್ತಿರುವ ಅಧಿಕಾರಿಗಳು ಏನನ್ನಾದರೂ ಮಾಡ ಬಲ್ಲರು ಎಂಬುದಕ್ಕೆ ಇಲಾಖೆಯಲ್ಲಿನ ನೊಂದಾವಣಾಧಿಕಾರಿಗಳ ಕಾರ್ಯ ವಾಖರಿಯೇ ಉತ್ತಮ ಉದಾಹರಣೆ ಎಂದ ಅವರು, ವಿವಿಧ ಸಾಫ್ಟ್‌ವೇರ್‌ಗಳನ್ನು ಬಳಸುತ್ತಿರುವ ಅಧಿಕಾರಿಗಳು ಲಂಚಕ್ಕಾಗಿ ಮೂಲ ದಾಖಲೆಗಳನ್ನೇ ತಿರುಚುತ್ತಿದ್ದಾರೆ. ಒಬ್ಬರ ನಿವೇಶನ ಮತ್ತೊಬ್ಬರ ಹೆಸರಿಗೆ, ಯಾರದ್ದೋ ಸೈಟು ಮತ್ತಾರದೋ ಹೆಸರಿಗೆ ಬದಲಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಬೆಂಗಳೂರು ನಗರ ವ್ಯಾಪ್ತಿಗೆ ಬಾರದ ಗ್ರಾಮ ಪಂಚಾಯತ್ ಭೂಮಿಯನ್ನೂ ಕೂಡ ಬಿಬಿಎಂಪಿ ಅಡಿಯಲ್ಲಿ ನೋಂದಣಿ ಮಾಡುತ್ತಿದ್ದಾರೆ. ಇದು ದುರಾದೃಷ್ಟಕರ. ಇವರಿಗೆ 10 ಲಕ್ಷ ಲಂಚ ಕೊಟ್ಟಲ್ಲಿ ವಿಧಾನಸೌಧವನ್ನೂ ಕೂಡ ಮಾರಿಬಿಡಬಹುದು. ಆದ್ದರಿಂದ ಸರ್ಕಾರ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.  
 
ಬಳಿಕ ಮಧ್ಯ ಪ್ರವೇಶಿಸಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಿ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಒಳ್ಳೆಯ ಸರ್ಕಾರ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಅವರಿಗೆ ಸಲಹೆ ನೀಡಿದರು. 

ವೆಬ್ದುನಿಯಾವನ್ನು ಓದಿ