ಭ್ರಷ್ಟಾಚಾರ ಮಾಡಿರುವುದು ಸಾಬೀತಾದ್ರೆ ರಾಜಕೀಯದಿಂದ ನಿವೃತ್ತಿ: ಸಿಎಂ ಸಿದ್ದರಾಮಯ್ಯ

ಮಂಗಳವಾರ, 14 ಫೆಬ್ರವರಿ 2017 (20:09 IST)
ನನ್ನ  ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಮಾಡಿರುವುದು ಸಾಬೀತುಪಡಿಸಿದಲ್ಲಿ ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
 
ಬಿಜೆಪಿ ನಾಯಕರು ಸುಮ್ಮನೆ ತೇಜೋವಧೆ ಮಾಡುವಲ್ಲಿ ನಿರತರಾಗಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ನಿಮ್ಮ ಹಳೆಯ ಕಡತಗಳನ್ನು ತೆಗೆಯುವುದು ಅನಿವಾರ್ಯವಾಗುತ್ತದೆ ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 
ವಿಧಾನಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಉತ್ತರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರದ ಆಧೀನದಲ್ಲಿರುವ ಇಡಿ, ಐಟಿ ಇಲಾಖೆಗಳು  ಕಾಂಗ್ರೆಸ್ ನಾಯಕರನ್ನು ಹುಡುಕಿ ಹುಡುಕಿ ದಾಳಿ ಮಾಡುತ್ತಿವೆ. ಬಿಜೆಪಿ ನಾಯಕರೇನು ಬಿಪಿಎಲ್ ಕಾರ್ಡ್ ಹೊಂದಿದ್ದಾರೆಯೇ ಎಂದು ತಿರುಗೇಟು ನೀಡಿದ್ದಾರೆ.
 
ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ಐಟಿ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿಎಂ, ಬಿಜೆಪಿಯವರು 150 ಕೋಟಿ ರೂಪಾಯಿ ದೊರೆತಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಕೇವಲ 41 ಕೋಟಿ ದೊರೆತಿದೆ ಎಂದು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
 
ತನಿಖೆ ಮುಕ್ತಾಯವಾಗುವವರೆಗೂ ಐಟಿ ದಾಳಿಯ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ. ನಾನು ಸತ್ಯಾಸತ್ಯತೆ ತಿಳಿಯಲು ಐಟಿ ಇಲಾಖೆಗೆ ಪತ್ರ ಬರೆದಿದ್ದೇನೆ. ದಾಳಿಯ ಮಾಹಿತಿಯನ್ನು ಯಾರಿಗೂ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಸಿಎಂ ಸ್ಪಷ್ಟಪಡಿಸಿದರು. 
 
ಹಾಗಾದರೇ ಯಡಿಯೂರಪ್ಪನವರಿಗೆ ಮಾಹಿತಿ ಕೊಟ್ಟಿರುವುದು ಯಾರು? ಇದು ಕಾನೂನು ಉಲ್ಲಂಘನೆಯಲ್ಲವೇ? ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಇನ್ನೂ 20 ಕೇಸ್‌ಗಳಿವೆ. ಆದರೆ, ನಮ್ಮ ಮೇಲೆ ಆರೋಪ ಮಾಡುವುದನ್ನು ಬಿಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ