ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಕಾಂಗ್ರೆಸ್‌ ಪಕ್ಷ ಅನಿವಾರ್ಯ: ಜಮೀರ್

ಶನಿವಾರ, 28 ಜನವರಿ 2017 (15:27 IST)
ನಮ್ಮನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಬೇರೆ ದಾರಿಯೇ ಇಲ್ಲ. ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಗುತ್ತದೆ ಎಂದು ಜೆಡಿಎಸ್ ಉಚ್ಛಾಟಿತ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಲು ಹೇಳಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯೇ. ಅದರಂತೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದು, ಇದೀಗ ಎಚ್‌ಡಿಕೆ ನಮ್ಮ ಮೇಲೆಯೇ ಕಿಡಿಕಾರುತ್ತಿದ್ದಾರೆ. ಬೇಕಿದ್ದರೆ ಈ ಕುರಿತು ಯಾವ ದೇವರ ಮೇಲೆ ಬೇಕಾದರೂ ಪ್ರಮಾಣ ಮಾಡುತ್ತೇನೆ ಎಂದು ಸವಾಲ್ ಎಸೆದಿದ್ದಾರೆ. 
 
ನಮ್ಮನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಬೇರೆ ದಾರಿಯೇ ಇಲ್ಲ. ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಗುತ್ತದೆ. ಈ ಕುರಿತು ಈಗಾಗಲೇ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಕುರಿತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದೇನೆ. ಹಾಗೂ ಕಾಂಗ್ರೆಸ್ ವತಿಯಿಂದ ಆಹ್ವಾನವು ಬಂದಿದೆ ಎಂದು ಸ್ಪಷ್ಟಪಡಿಸಿದರು. 
 
ಜೆಡಿಎಸ್ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಮ್ಮ ಭವಿಷ್ಯ ನಿಂತಿದೆ. ನನ್ನ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದರೂ ಗೆಲುವ ವಿಶ್ವಾಸ ಇದೆ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
 
ಜೆಡಿಎಸ್ ಪಕ್ಷದಲ್ಲಿ ಬೆಂಬಲ ಹೆಚ್ಚಿರುವ ವ್ಯಕ್ತಿಯನ್ನು ಬೆಳೆಯಲು ಬಿಡುವುದಿಲ್ಲ. ಅದರಲ್ಲೂ ನನ್ನನ್ನು ಮೊದಲಿನಿಂದಲೂ ಟಾರ್ಗೆಟ್ ಮಾಡಲಾಗಿದೆ ಎಂದು ಜೆಡಿಎಸ್ ಉಚ್ಛಾಟಿತ ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ