ಬೆಂಗಳೂರಿನಲ್ಲಿ ಗೌಡರಿಗೆ ಹೇರಳ ಆಸ್ತಿಯಿದೆ, ಎಲ್ಲಿ ಬೇಕಾದ್ರೂ ಶೆಡ್ ಹಾಕ್ಕೊಳ್ಳಲಿ: ಡಿಕೆಶಿ ವ್ಯಂಗ್ಯ

ಶನಿವಾರ, 24 ಜನವರಿ 2015 (16:14 IST)
ಜೆಡಿಎಸ್ ಕಚೇರಿ ವಿಚಾರವನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ನಗರದಲ್ಲಿ ಇಂದು ಅಣಕಿಸಿದ್ದು, ಜೆಡಿಎಸ್ ಕಚೇರಿ ನಿರ್ಮಾಣಕ್ಕೆ ಜಾಗವಿಲ್ಲ ಎಂದಾದರೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿ. ನಾವು ಸೈಟನ್ನು ತ್ವರಿತವಾಗಿ ಒದಗಿಸುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ. 
 
ಜೆಡಿಎಸ್ ಪಕ್ಷವು ತನ್ನ ಪ್ರಾದೇಶಿಕ ಕಚೇರಿಗಾಗಿ ಶೆಡ್‌ನ್ನು ನಿರ್ಮಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇಡೀ ಬೆಂಗಳೂರಿನಲ್ಲಿ ಗೌಡರು ಅಪಾರ ಆಸ್ತಿ ಹೊಂದಿದ್ದಾರೆ. ಸಂಪೂರ್ಣ ಬೇಂಗಳೂರೇ ಗೌಡರಿಗೆ ಸೇರಿದ್ದಾಗಿದೆ. ಹಾಗಿರುವಾಗ ಕಚೇರಿ ನಿರ್ಮಾಣಕ್ಕೆ ದೇವೇಗೌಡರಿಗೆ ಬೇರೆ ಜಾಗ ಸಿಗಲಿಲ್ಲವೇ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದ ಸಚಿವರು, ಒಂದು ವೇಳೆ ಅವರಿಗೆ ಕಚೇರಿ ನಿರ್ಮಾಣಕ್ಕೆ ಜಾಗವೇ ಇಲ್ಲ ಎಂದಾದರೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿ. ನಮ್ಮ ಸರ್ಕಾರ ಅಗತ್ಯವಾದಷ್ಟು ಸೈಟನ್ನು ತ್ವರಿತವಾಗಿ ಮಂಜೂರು ಮಾಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 
 
ಇನ್ನು ಜೆಡಿಎಸ್ ಬಳಸುತ್ತಿದ್ದ ಹಳೆ ಕಚೇರಿಯು ನ್ಯಾಯಾಲಯದ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಕಚೇರಿಯು ಕಾಂಗ್ರೆಸ್‌ಗೆ ಸೇರಿದ್ದಾಗಿದ್ದು, ಅದನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಿ ಎಂದು ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಆದ್ದರಿಂದ ಜೆಡಿಎಸ್ ತಾನು ಬಳಸುತ್ತಿದ್ದ ಕಚೇರಿಯನ್ನು ಕಾಂಗ್ರೆಸ್‌ಗೆ ವಹಿಸಿಕೊಟ್ಟು, ಬಳಿಕ ಅದೇ ಕಚೇರಿಯ ಹಿಂಭಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಅದನ್ನೇ ಕಚೇರಿ ಎಂದು ಘೋಷಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಹೀಗೆ ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ