ಕಸ ಮುಕ್ತ ವಾರ್ಡ್ ನಿರ್ಮಿಸಿದಲ್ಲಿ ವಿಶೇಷ ಬಹುಮಾನ: ಸಿದ್ದರಾಮಯ್ಯ

ಬುಧವಾರ, 30 ಸೆಪ್ಟಂಬರ್ 2015 (17:00 IST)
ವಾರ್ಡ್‌ಗಳಲ್ಲಿನ ಪಾರ್ಕ್‌ಗಳನ್ನು ಕಾಪಾಡಿಕೊಂಡು ಬೆಂಗಳೂರು ಹಸಿರಾಗಿರಿಸಿದಲ್ಲಿ ನಗರ ಸುಸಜ್ಜಿತವಾಗಿರಲಿದೆ. ಒಂದು ವೇಳೆ ಯಾವುದೇ ಅಧಿಕಾರಿಗಳು ಕಸ ನಿರ್ವಹಣೆಯಲ್ಲಿ ದುರ್ವರ್ತನೆ ತೋರಿದಲ್ಲಿ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. 
 
ನಗರದ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನೂತನ ಕಾರ್ಪೊರೇಟರ್‌ಗಳಿಗಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರು ನಗರವನ್ನು ಸ್ವಚ್ಛತೆ ಕಾಪಾಡುವುದು ಅಗತ್ಯದೊಂದಿಗೆ ಅನಿವಾರ್ಯವೂ ಆಗಿದೆ. ಅಲ್ಲದೆ ಪಾರ್ಕ್‌ಗಳನ್ನು ಉತ್ತಮ ರೀತಿಯಲ್ಲಿ ಪೋಷಿಸಿ ಸಂರಕ್ಷಿಸಿ. ನಗರ ಹಸಿರಾಗಿದ್ದಲ್ಲಿ ನಗರ ಸುಸಜ್ಜಿತವಾಗಿರಲಿದೆ ಎಂದ ಸಿಎಂ, ಎಲ್ಲಾ ವಾರ್ಡ್‌ನ ಸದಸ್ಯರೂ ಕೂಡ ತಮ್ಮ ತಮ್ಮ ವಾರ್ಡ್‌ಗಳನ್ನು ಕಸ ಮುಕ್ತವನ್ನಾಗಿಸಿ ಎಂದು ಕಿವಿ ಮಾತನ್ನೇಳಿದರು. ಈ ವೇಳೆ ಕಸ ಮುಕ್ತ ಮಾಡಿದ ಕಾರ್ಪೊರೇಟರ್‌ಗೆ ಸರ್ಕಾರದ ವತಿಯಿಂದಲೇ ವಿಶೇಷ ಬಹುಮಾನ ವಿತರಿಸಲಾಗುವುದು ಎಂದು ಘೋಷಿಸಿದರು. 
 
ಬಳಿಕ ಮಾತನಾಡಿದ ಅವರು, ಕಸ ನಿರ್ವಹಣೆಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು. ಕಸ ನಿರ್ವಹಣೆಯಲ್ಲಿ ಯಾವುದೇ ಅಧಿಕಾರಿ ದುರ್ವರ್ತನೆ ತೋರಿದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆರೆ ಭೂಮಿ ಒತ್ತುವರಿಯಾಗಿದೆ. ಈ ಹಿನ್ನೆಲೆಯಲ್ಲಿ 15 ದಿನಕ್ಕೊಮ್ಮೆ ನಗರ ಪ್ರದಕ್ಷಿಣೆ ನಡೆಸಲಿದ್ದೇನೆ ಎಂದು ಸ್ಪಷ್ಟಪಡಿಸಿದರು.  

ವೆಬ್ದುನಿಯಾವನ್ನು ಓದಿ