ರಾಯಚೂರು ಗ್ರಾ. ಪಂಚಾಯತ್‌ಗಳಲ್ಲಿ ಅಕ್ರಮ: ವರದಿ ಸಲ್ಲಿಸಲು ಸೂಚಿಸಿದ ಸಿಇಒ

ಬುಧವಾರ, 27 ಮೇ 2015 (11:51 IST)
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬೋಗಸ್ ಕಾರ್ಡ್ ನೀಡುವ ಮೂಲಕ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ಷ್ಮವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ವಿಜಯ ಜೋತ್‌ಸ್ನಾ ಅವರು ಕೆಳ ಹಂತದ ಅಧಿಕಾರಿಗೆ ಆದೇಶಿಸಿದ್ದಾರೆ. 
 
ತಾಲೂಕು ಪಂಚಾಯತ್‌ನ ಎಕ್ಸಿಕ್ಯುಟೀವ್ ಎಂಜಿನಿಯರ್ ಪ್ರಾಣೇಶ್ ಅವರಿಗೆ ಈ ಆದೇಶ ನೀಡಿರುವ ಸಿಇಒ, ಒಂದು ವಾರದ ಒಳಗೆ ಸೂಕ್ತ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.  
 
ಇನ್ನು ಈ ಅಕ್ರಮವು ಜಿಲ್ಲೆಯ ಲಿಂಗಸಗೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಹೊನ್ನೂರು ಹಾಗೂ ಗೌಡೂರು ಗ್ರಾಮ ಪಂಚಾಯತ್‌ಗಳಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಪಂಚಾಯತ್ ಕಾರ್ಯ ವೈಖರಿಗಳಲ್ಲಿ ಪಿಡಿಒ, ಕಾರ್ಯದರ್ಶಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳೆಲ್ಲರೂ ಸೇರಿ ಅಕ್ರಮ ಎಸಗಿರುವುದು ಕಂಡು ಬಂದಿದೆ. ಇಲ್ಲಿನ ಅಧಿಕಾರಿಗಳು ಲಂಚ ಕೊಟ್ಟಲ್ಲಿ ಏನು ಬೇಕಾದರೂ ಮಾಡಲು ಸಿದ್ಧರಿದ್ದು ಸತ್ತವರಿಗೂ ಕೂಲಿ ಕಾರ್ಡ್‌ಗಳನ್ನು ನೀಡಲಾಗುತ್ತದೆ. 
 
ಯೋಜನೆ ಅಡಿಯಲ್ಲಿ ಸ್ಥಳೀಯರಿಗೆ ಕೂಲಿ ಕೊಟ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಬೇಕಿರುವುದು ನಿಯಮ. ಆದರೆ ನಿಯಮಗಳೆಲ್ಲವನ್ನೂ ಗಾಳಿಗೆ ತೂರಿರುವ ಅಧಿಕಾರಿಗಳು ಲಂಚ ಕೊಟ್ಟವನಿಗೆ ಕೂಲಿ ಕಾರ್ಡ್ ನೀಡುವುದು, ಜೆಸಿಬಿಯಿಂದ ಕೆಲಸ ನಿರ್ವಹಿಸಿ ಉಳಿದ ಹಣವನ್ನು ಲಪಟಾಯಿಸುದು ಹಾಗೂ ಸತ್ತವರ ಹೆಸರಿನಲ್ಲಿ ಬೋಗಸ್ ಕಾರ್ಡ್ ನೀಡುವುದು ಸೇರಿದಂತೆ ಇನ್ನಿತರೆ ಕೃತ್ಯಗಳನ್ನು ಎಸಗುವ ಮೂಲಕ ಇಲ್ಲಿನ ಸಾರ್ವಜನಿಕರಿಗೆ ಮೋಸ ಮಾಡಿರುವ ಆರೋಪ ಇಲ್ಲಿನ ಅಧಿಕಾರಿಗಳ ಮೇಲಿದೆ. 

ವೆಬ್ದುನಿಯಾವನ್ನು ಓದಿ