ವಿಟಿಯು ವಿವಿಯಲ್ಲಿ ಅಕ್ರಮ: 18 ಮಂದಿಯಿಂದ ಭಾರಿ ಹಣ ದುರುಪಯೋಗ

ಸೋಮವಾರ, 22 ಡಿಸೆಂಬರ್ 2014 (17:17 IST)
ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತೊಮ್ಮೆ ಪೇಚಿಗೆ ಸಿಲುಕಿದ್ದು, ಅನಾವಶ್ಯಕವಾಗಿ ವಿವಿಯ ನಿಧಿಯನ್ನು ಪೋಲು ಮಾಡುತ್ತಿರುವುದು ಬೆಳಕಿಗೆ ಬಂದಿದೆ. 
 
ವಿವಿಯ ಕಾರ್ಯಕಾರಿ ಸಮಿತಿಯ ಹಾಗೂ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರುಗಳು ಕಾರಿನಲ್ಲಿ ಪ್ರಯಾಣ ಬೆಳೆಸಬಹುದಾದರೂ ವಿಮಾನದಲ್ಲಿಯೇ ಹಾರಾಟ ನಡೆಸುವ ಮೂಲಕ ವಿಶ್ವವಿದ್ಯಾಲಯದ ನಿಧಿಯನ್ನು ಅನಿವಾರ್ಯತೆ ಇಲ್ಲದೆಯೂ ಬಳಸಿಕೊಂಡಿದ್ದಾರೆ. ಬಳಸಿಕೊಂಡಿದ್ದರೆ ಪರವಾಗಿಲ್ಲ. ಆದರೆ ಅವರು ಪ್ರಯಾಣಿಸಿರುವುದಕ್ಕೆ ಸಂಬಂಧಿಸಿದಂತೆ ಲೆಕ್ಕ ಪತ್ರ ವಿಭಾಗಕ್ಕೆ ಸೂಕ್ತ ದಾಖಲೆಗಳನ್ನೇ ನೀಡಿಲ್ಲ. ಆದರೆ ದಾಖಲೆಗಳಿಲ್ಲದೆಯೂ ಹಣ ಪಾವತಿಸಿರುವುದು ಲೆಕ್ಕಪತ್ರ ವಿಭಾಗದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. 
 
ವಿವಿಯ ಅಧಿಕಾರಿಗಳು ಹಾಗೂ ಸಂಬಂಧವೇ ಇಲ್ಲದ ವ್ಯಕ್ತಿಗಳು ಈ ಹಣವನ್ನು ಅನರ್ಥವಾಗಿ ಬಳಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ ವಿವಿಗೆ ಸಂಬಂಧಿಸದ ವ್ಯಕ್ತಿಗಳು ಪ್ರಯಾಣಸಿದ್ದಾರೆ ಎಂಬುದು ಒಂದೆಡೆಯಾದರೆ ಇನ್ನೂ ಕೆಲವು ಕೇವಲ ನಾಮಧೇಯವನ್ನು ಮಾತ್ರ ನಮೂದಿಸಿ ಸಾಕಷ್ಟು ಹಣವನ್ನು ಇತರೆ ಅಧಿಕಾರಿಗಳು ಸ್ವಾಹ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. 
 
ಇನ್ನು ಈ ಅಧಿಕಾರಿಗಳೆಲ್ಲರೂ ಕೂಡ ಘಟಿಕೋತ್ಸವ ಹಾಗೂ ಇತರೆ ವಿವಿಗಳ ಪರಿಶೀಲನೆಗೆಂದು ತೆರಳಿದ್ದರು ಎಂದು ನಮೂದಿಸಲಾಗಿದ್ದು, ಕೇವಲ 18 ಮಂದಿಗೆ ಮೂರು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 4,08,687 ರೂ. ಗಳನ್ನು ವಿವಿಯ ಲೆಕ್ಕ ಪತ್ರ ವಿಭಾಗ ಪಾವತಿಸಿದೆ ಎಂದು ತಿಳಿದು ಬಂದಿದೆ. 
 
ಇನ್ನು ಪ್ರಯಾಣಿಸಿದವರ ಪಟ್ಟಿ ಇಂತಿದ್ದು, ಎನ್. ಅಪ್ಪಾಜಿ ಗೌಡ, ಕೆ.ಎಸ್.ರಂಗಪ್ಪ, ವಿದ್ಯಾಶಂಕರ್, ಎಸ್. ರಾಜಶೇಖರಯ್ಯ, ಎಂ.ಆರ್. ಹೊಳ್ಳ(6470), ಡಿ.ಹೆಚ್.ರಾವ್, ಸೇರಿದಂತೆ ಇತರರು ಪ್ರಯಾಣಿಸಿದ್ದಾರೆ. ಇವರೆಲ್ಲರೂ ಕಾರ್ಯಕಾರಿ ಸಮಿತಿಯ ಸದಸ್ಯರು ಎನ್ನಲಾಗಿದ್ದು, ವಿವಿಗೆ ಸಂಬಂಧಪಡದವರೂ ಕೂಡ ವಿವಿ ಹಣದಲ್ಲಿಯೇ ಪ್ರಯಾಣಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. 
 
ವಿವಿಗೆ ಸಂಬಂಧಪಡದ ಹಲವರ ಪಟ್ಟಿ ಇಂತಿದ್ದು, ಆರ್. ಸೋಮಶೇಖರ್(14528), ಕೃಷ್ಣಕುಮಾರ್, ವಿಶ್ವೇಶ್ವರಯ್ಯ, ಜಿ.ಎನ್.ಕೃಷ್ಣಮೂರ್ತಿ(10225), ಎನ್ನಲಾಗಿದೆ. ಇನ್ನು ವಿವಿಗೆ ಸಂಬಂಧಿಸಿದ ದೂರನ್ನು ಆಲಿಸುತ್ತಿದ್ದ ನ್ಯಾಯಮೂರ್ತಿ ಅಭಯ್ ಗೋಯಲ್ ಕೂಡ ವಿವಿ ನಿಧಿಯನ್ನು ಬಳಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 
 
ಇನ್ನು ಈ ಬಗ್ಗೆ ಮಾತನಾಡಿರುವ ವಿವಿ ಕುಲಪತಿ ಮಹೇಶಪ್ಪ, ವಿವಿಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದಿಲ್ಲ, ಪ್ರಯಾಣಿಸಿರುವ ಎಲ್ಲಾ ಅಧಿಕಾರಿಗಳೂ ಕೂಡ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರೂ ಕೂಡ ವಿವಿಯ ಗಣ್ಯರೇ. ಒಂದು ವೇಳೆ ಹೆಚ್ಚು ಬಳಸಿಕೊಳ್ಳಲಾಗಿದೆ ಎಂದು ತಿಳಿದು ಬಂದಲ್ಲಿ ವಾಪಸ್ ನೀಡಲಿದ್ದಾರೆ ಎಂದಿದ್ದಾರೆ. 
 
ಈ ಮೇಲಿನ ಎಲ್ಲರೂ ಬೆಂಗಳೂರು-ಬೆಳಗಾಂ, ಬೆಳಗಾಂ-ಗೋವಾ, ಬೆಳಗಾಂ-ಕೊಚ್ಚಿ, ಕೊಚ್ಚಿ-ಮುಂಬೈ ಸೇರಿದಂತೆ ಇತರೆ ಸ್ಥಳಗಳಿಗೆ ಅನಧಿಕೃತವಾಗಿ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ. 
 

ವೆಬ್ದುನಿಯಾವನ್ನು ಓದಿ