ಅಂಬೇಡ್ಕರ್ ಅಭಿವೃದ್ಧಿ ನಿಗಮ ಅವ್ಯವಹಾರ: ಹೆಚ್‌ಡಿಕೆ‌ ಒತ್ತಡಕ್ಕೆ ಮಣಿದ ಸರಕಾರದಿಂದ ಸಿಐಡಿ ತನಿಖೆ ಘೋಷಣೆ

ಬುಧವಾರ, 17 ಡಿಸೆಂಬರ್ 2014 (16:10 IST)
ಇಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ದಲಿತರಿಗೆ ಅನ್ಯಾಯವಾಗಿದೆ. ಹಾಗಾಗಿ ನಿಗಮದ ಹಿಂದಿನ ಕಾರ್ಯ ವೈಖರಿ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.  
 
ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದ ಹೆಚ್‌ಡಿಕೆ, ನಿಗಮದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ದಲಿತರಿಗೆ ಅನ್ಯಾಯವಾಗಿದೆ. ದಲಿತರಿಗೆ ಸಿಗಬೇಕಿದ್ದ ಭೂಮಿಯನ್ನು ಸಮರ್ಪಕವಾಗಿ ವಿತರಿಸಿಲ್ಲ. ಅಲ್ಲದೆ ಕೆಲವರಿಗೆ ನಿಗಮದಿಂದ ಭೂಮಿಯನ್ನು ನೀಡಲಾಗಿದೆಯಾದರೂ ಆ ಭೂಮಿ ಫಲವತ್ತತೆಯಾಗಿಲ್ಲದೆ ವ್ಯವಸಾಯಕ್ಕೆ ಅಯೋಗ್ಯವಾಗಿದೆ. ಇನ್ನು ಬೇಸಾಯಕ್ಕೆ ಉತ್ತಮವಾಗಿರುವ ಭೂಮಿಯನ್ನು ಕೆಲ ಪ್ರಭಾವಿ ವ್ಯಕ್ತಿಗಳು ಕಬಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. 
 
ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಆಂಜನೇಯ, ಸಿಐಡಿ ಪೊಲೀಸರಿಗೆ ಒಪ್ಪಿಸುವ ಮೂಲಕ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಲಾಗುವುದು ಎಂದು ಭರಸೆ ನೀಡಿದರು. ಇದಕ್ಕೂ ಮುನ್ನ ಸಚಿವರಿಗೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತನಿಖೆಗೆ ಒಪ್ಪಿಸಿ ಎಂದು ನಿರ್ದೇಶಿಸಿದ್ದರು. ಬಳಿಕ ಸಚಿವರು ತನಿಖೆಯ ಭರವಸೆ ಇತ್ತರು.  

ವೆಬ್ದುನಿಯಾವನ್ನು ಓದಿ