ಅಕ್ರಮ ಗಣಿಗಾರಿಕೆ : ಡಿಕೆಶಿ ಸಹೋದರ ಡಿಕೆ ಸುರೇಶ್‌ಗೆ ಕೋರ್ಟ್‌ನಿಂದ ನೋಟಿಸ್

ಶುಕ್ರವಾರ, 17 ಅಕ್ಟೋಬರ್ 2014 (13:52 IST)
ಕನಕಪುರ ತಾಲೂಕು ಮುನೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಸಂಸದ ಡಿ.ಕೆ.ಸುರೇಶ್‌ ಗುರುವಾರ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್‌ ಮತ್ತೂಂದು ಸಮನ್ಸ್‌ ಹೊರಡಿಸಿದೆ. 
 
ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಕೋಟೆಕೊಪ್ಪ ಗ್ರಾಮದ ಮುನೇಶ್ವರನ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಅರಣ್ಯ ಸಂಪತ್ತು ಲೂಟಿ, ಪರಿಸರ ನಾಶ, ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ವಿರುದ್ಧ ಅರಣ್ಯ ಇಲಾಖೆಯು ಕನಕಪುರ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ. 
 
ಅರಣ್ಯ ಇಲಾಖೆ ದೂರನ್ನು ವಿಚಾರಣೆ ನಡೆಸುತ್ತಿರುವ ಕನಕಪುರ ಜೆಎಂಎಫ್ಸಿ ನ್ಯಾಯಾಲಯ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಹೊರಡಿಸಿತ್ತು. ಆದರೆ ಸುರೇಶ್‌ ಹಾಜರಾಗದ ಹಿನ್ನೆಲೆಯಲ್ಲಿ ಎರಡನೇ ಸಮನ್ಸ್‌ ಜಾರಿ ಮಾಡಿ ಅ.31ರಂದು ಹಾಜರಾಗಲು ಸೂಚಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ