ವ್ಯಾಯಾಮದ ಪರಿಣಾಮ ಶಿವಣ್ಣನ ಬಲ ಭುಜಕ್ಕೆ ನೋವಾಗಿದೆಯಷ್ಟೇ: ರಾಘವೇಂದ್ರ ರಾಜ್‌ಕುಮಾರ್

ಮಂಗಳವಾರ, 6 ಅಕ್ಟೋಬರ್ 2015 (13:19 IST)
ಸ್ಯಾಂಡಲ್‌ವುಡ್‌ನ ಖ್ಯಾತ ನಟ ಡಾ.ಶಿವರಾಜ್ ಕುಮಾರ್ ಅವರು ಇಂದು ಬಲ ಭುಜದಲ್ಲಿ ನೋವು ಕಾಣಿಸಿಕೊಂಡಿತು ಎಂಬ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರ ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಅವರಿಗೆ ಯಾವುದೇ ಆರೋಗ್ಯ ಸಂಬಂಧಿ ತೊಂದರೆ ಇಲ್ಲ, ಹೆಚ್ಚು ವ್ಯಾಯಾಮ ಮಾಡಿದ ಕಾರಣ ಬಲ ಭುಜದಲ್ಲಿ ಸ್ವಲ್ಪ ಮಟ್ಟಿನ ನೋವು ಕಾಣಿಸಿಕೊಂಡಿತ್ತು ಎಂಬುದಾಗಿ ಮಾಹಿತಿ ನೀಡಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಆಸ್ಪತ್ರೆಯಲ್ಲಿರುವ ಅವರನ್ನು ಕಂಡು ಬಂದೆ. ಎಂದಿನಂತೆಯೇ ಆರೋಗ್ಯವಾಗಿದ್ದಾರೆ. ಪ್ರತಿನಿತ್ಯ ಜಿಮ್‌ನಲ್ಲಿ ವ್ಯಾಯಾಮ ಮಾಡಿದ ಹಿನ್ನೆಲೆಯಲ್ಲಿ ಭುಜದಲ್ಲಿ ಸ್ವಲ್ಪ ಮಟ್ಟಿನ ನೋವು ಕಾಣಿಸಿಕೊಂಡಿದೆ. ಪರಿಣಾಮ ಇಸಿಜಿಯನ್ನೂ ಮಾಡಿರುವ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆ ಇಲ್ಲ. ಇನ್ನೆರಡು ದಿನಗಳ ಬಳಿಕ ಡಿಸ್‌ಚಾರ್ಜ್ ಆಗಲಿದ್ದು, 15 ದಿನಗಳ ಬಳಿಕ ಚಿತ್ರೀಕರಣದಲ್ಲಿ ಮತ್ತೆ ಪಾಲ್ಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು. 
 
ಇದೇ ವೇಳೆ, ವಿಐಪಿ ಎಂಬ ಕಾರಣದಿಂದ ವೈದ್ಯರು ಡಿಸ್ ಚಾರ್ಜ್ ಮಾಡುತ್ತಿಲ್ಲ. ವಿಶ್ರಾಂತಿ ಸೂಚಿಸುವ ಜೊತೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಆಸ್ಪತ್ರೆಯಲ್ಲಿಯೇ ಒದಗಿಸುತ್ತಿದ್ದಾರೆ. ಅಭಿಮಾನಿಗಳ ಪ್ರೀತಿ, ಆಶೀರ್ವಾದದಿಂದ ಶಿವಣ್ಣ ಚೆನ್ನಾಗಿದ್ದಾರೆ. ಹಾಗಾಗಿ ಅರ ಆರೋಗ್ಯದ ಬಗ್ಗೆ ಯಾವುದೇ ಸುಳ್ಳು ವದಂತಿ ಹಬ್ಬಿಸುವುದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.
 
ಇನ್ನು ಭುಜದಲ್ಲಿ ನೋವು ಕಾಣಿಸಿಕೊಂಡಿತು ಎಂಬ ಕಾರಣದಿಂದ ಶಿವಣ್ಣ ಅವರನ್ನು ಇಂದು ಬೆಳಗ್ಗೆ 8.45ಕ್ಕೆ ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಇಸಿಜಿ ಪರೀಕ್ಷೆ ನಡೆಸಲಾಗಿದ್ದು, ಸ್ವಲ್ಪ ಮಟ್ಟಿನ ವ್ಯತ್ಯಾಸ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿ ನಚಿಕಿತ್ಸೆಗಾಗಿ ಬಳಿಕ ಮಲ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಹೃದಯಕ್ಕೆ ಸಂಬಂಧಿಸಿದ ಆ್ಯಂಜಿಯೋಗ್ರಾಂ ಎಂಬ ಪರೀಕ್ಷೆ ನಡೆಯಲಾಗಿದ್ದು, ಯಾವುದೇ ತೊಂದರೆ ಇಲ್ಲ ಎಂಬುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ಶಿವಣ್ಣ ಅವರ ಕುಟುಂಬದ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ