ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಆರೆಸ್ಸೆಸ್, ಬಿಜೆಪಿ: ರಮ್ಯ

ಮಂಗಳವಾರ, 30 ಆಗಸ್ಟ್ 2016 (15:28 IST)
ಕಾಂಗ್ರೆಸ್ ಪಕ್ಷದ ಹೋರಾಟದಿಂದಲೇ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಆ ಸಂದರ್ಭದಲ್ಲಿ ಆರೆಸ್ಸೆಸ್, ಬಿಜೆಪಿ ಬ್ರಿಟಿಷರೊಂದಿಗೆ ಕೈಜೋಡಿಸಿದ್ದವು. ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಆರೆಸ್ಸೆಸ್, ಬಿಜೆಪಿ ಪಾತ್ರ ಶೂನ್ಯ ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಮಾಜಿ ಸಂಸದೆ ರಮ್ಯ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
 
ಪಾಕಿಸ್ತಾನ ನರಕವಲ್ಲ. ಪಾಕ್ ಜನ ತುಂಬಾ ಒಳ್ಳೆಯವರು ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ನಟಿ ರಮ್ಯ ಇದೀಗ, ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಬ್ರಿಟಿಷರೊಂದಿಗೆ ಕೈಜೋಡಿಸಿದ್ದವು ಎಂದು ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ್ದಾರೆ.
 
ಅಂದಿನ ಆರೆಸ್ಸೆಸ್ ಮುಖಂಡರು ಬ್ರಿಟಿಷರೊಂದಿಗೆ ಕೈಜೋಡಿಸಿ ಕಾಂಗ್ರೆಸ್ ಹೋರಾಟಗಾರರ ವಿರುದ್ಧ ಸಂಚು ರೂಪಿಸಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಧೀಮಂತ ಹೋರಾಟಗಾರರ ಕೆಚ್ಚೆದೆಯ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ತಿಳಿಸಿದ್ದಾರೆ.
 
ದೇಶದಲ್ಲಿ ಬೇರೆ ಬೇರೆ ಜಾತಿ ಧರ್ಮ ಭಾಷೆಗಳಿವೆ. ಪ್ರತಿಯೊಬ್ಬರು ಎಲ್ಲಾ ಜಾತಿ, ಧರ್ಮ ಮತ್ತು ಭಾಷೆಯನ್ನು ಪ್ರೀತಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ನಟಿ ರಮ್ಯ ಉಪ "ದೇಶ" ನೀಡಿದ್ದಾರೆ.
 
ಎಲ್ಲರನ್ನು ಒಂದೇ ಎಂಬ ರೀತಿ ನೋಡ್ಬೇಕು ಮತ್ತು ಪ್ರೀತಿಸಬೇಕು. ನಿಜವಾದ ಪ್ರೀತಿ ಎಂದರೆ ದೇಶದಲ್ಲಿರುವ ಪ್ರತಿಯೊಬ್ಬರನ್ನು ಪ್ರೀತಿಸಬೇಕು ಎಂದರು,
 
ಪಾಕಿಸ್ತಾನದ ವಿರುದ್ಧದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಮ್ಯಾ, ಕೆಲವು ಬಾರಿ ಪ್ರೀತಿಯನ್ನು ಹೇಳಿಕೊಂಡಂತೆ ದೇಶಪ್ರೇಮವನ್ನು ಹೇಳಿಕೊಳ್ಳಬೇಕಾಗುತ್ತದೆ. ನನ್ನ ದೇಶಭಕ್ತಿಯ ಬಗ್ಗೆ ಅನುಮಾನ ಪಡುವವರು ಪಡಲಿ. ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
 
ಪಾಕಿಸ್ತಾನ ನರಕ ಎಂದು ಹೇಳಿಕೆ ನೀಡಿದ ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಂಸದೆ ರಮ್ಯಾ ಹಾಗೇನಿಲ್ಲ. ಪಾಕಿಸ್ತಾನದಲ್ಲಿನ ಜನರು ಒಳ್ಳೆಯವರು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗ್ರಾಸವಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ