ಬಿಬಿಎಂಪಿ ಅಧಿಕಾರ: 10 ಕೋಟಿ ರೂಪಾಯಿ ಡಿಮ್ಯಾಂಡ್ ಇಟ್ಟ ಪಕ್ಷೇತರರು?

ಶನಿವಾರ, 29 ಆಗಸ್ಟ್ 2015 (13:24 IST)
ಬಿಬಿಎಂಪಿ ಫಲಿತಾಂಶದ ಬಳಿಕ ಅಧಿಕಾರಕ್ಕಾಗಿ ಕಾಂಗ್ರೆಸ್ - ಬಿಜೆಪಿ ನಡೆಯುತ್ತಿರುವ ಕಸರತ್ತುಗಳು ಮುಂದುವರೆದಿದ್ದು, ಪಕ್ಷೇತರರು ಮತ್ತು ಜೆಡಿಎಸ್ ಜತೆ  ಮೈತ್ರಿಗಾಗಿ ಕೈ ಮತ್ತು ಕೇಸರಿ ಪಕ್ಷಗಳು ನಡೆಸುತ್ತಿರುವ ಸತಾಯಗತಾಯ ಪ್ರಯತ್ನಗಳು ಕುತೂಹಲವನ್ನು ಕೆರಳಿಸಿವೆ.

ಬಿಬಿಎಂಪಿ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಹೆಣಗಾಡುತ್ತಿರುವ  ನಡುವೆ ಮೂವರು ಪಕ್ಷೇತರ ಸದಸ್ಯರು ಬೆಂಬಲ ಬೇಕೆಂದರೆ ತಲಾ 10 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
 
ಕೋನೆನ ಅಗ್ರಹಾರ ವಾರ್ಡ್‌ನ ಚುನಾಯಿತ ಸದಸ್ಯ ಚಂದ್ರಪ್ಪರೆಡ್ಡಿ, ಸಗಾಯ್‌ಪುರದ ಪ್ರತಿನಿಧಿ ಏಳುಮಲೈ ಹಾಗೂ ಹೊಯ್ಸಳನಗರ ವಾರ್ಡ್ ಸದಸ್ಯ ಆನಂದ್ ಕುಮಾರ್ ಬಿಜೆಪಿ ನಾಯಕ ಆರ್. ಅಶೋಕ್ ಬಳಿ 10 ಕೋಟಿ ರೂಪಾಯಿ ಮತ್ತು  ಸ್ಥಾಯಿ ಸಮಿತಿಯಲ್ಲಿ ಸ್ಥಾನಮಾನವನ್ನು ನೀಡುವಂತೆ ಕೇಳಿದ್ದಾರೆ. ಆದರೆ ಸ್ಥಾಯಿ ಸಮಿತಿಯಲ್ಲಿ ಹೊಣೆಗಾರಿಕೆಯನ್ನು ನೀಡಲು ಒಪ್ಪಿರುವ ಅಶೋಕ್ ಹಣ ನೀಡಲು ಸಾಧ್ಯವಿಲ್ಲವೆಂದಿದ್ದಾರೆ ಎಂದು ಸುದ್ದಿ ಹೊರಬಿದ್ದಿದೆ.
 
ಸದ್ಯ ಪಕ್ಷೇತರ ಸದಸ್ಯರೆಲ್ಲರೂ  ಕೇರಳದ ಅಲೆಪ್ಪಿಯ ಖಾಸಗಿ ರೆಸಾರ್ಟ್‌ ಒಂದರಲ್ಲಿ ತಂಗಿದ್ದಾರೆನ್ನಲಾಗಿದೆ.
 
ಜತೆಗೆ ಕೆಂಪಾಪುರ ಅಗ್ರಹಾರದ ಕಾರ್ಪೋರೇಟರ್ ಎಂ. ಗಾಯತ್ರಿ ನನಗೆ ಹಣ ಬೇಡ. ನವೆಂಬರ್‌ನಲ್ಲಿ ನಡೆಯುವ ಬಿಜೆಪಿ ಪದಾಧಿಕಾರಿಗಳ ಸಭೆಯ ಸಂದರ್ಭದಲ್ಲಿ ಪಕ್ಷದಲ್ಲಿ ಉನ್ನತ ಸ್ಥಾನ ಕೊಡಿ ಎಂದು ಬೇಡಿಕೆಯನ್ನಿಟ್ಟಿದ್ದರು ಎಂದು ತಿಳಿದು ಬಂದಿದೆ. ಗಾಯತ್ರಿ ಚುನಾವಣೆ ಸಂದರ್ಭದಲ್ಲಿ  ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿತ್ತು. 

ವೆಬ್ದುನಿಯಾವನ್ನು ಓದಿ