ಭಾರತ ಬಂದ್: ಸಿಐಟಿಯುಸಿಯ ಬೆಂಗಳೂರು ಬಂದ್ ಯಶಸ್ವಿ

ಬುಧವಾರ, 2 ಸೆಪ್ಟಂಬರ್ 2015 (17:00 IST)
ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ನಡೆಸಲಾಗುತ್ತಿರುವ ಬಂದ್ ಬೆಂಗಳೂರಿನಲ್ಲಿಯೂ ಕೂಡ ಯಶಸ್ವಿಯಾಗಿದ್ದು, ಇಂದು ನಗರದ ಟೌನ್‌ ಹಾಲ್‌ನಲ್ಲಿ ಸಿಐಟಿಯು ಕಾರ್ಯಕರ್ತರು ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದರು. 
 
ನಗರದ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. 
 
ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಸಿಐಟಿಯು ಕಾರ್ಯದರ್ಶಿ ಸುಬ್ಬಾರಾವ್, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ರೈಲ್ವೆ ಹಾಗೂ ರಕ್ಷಣಾ ವಲಯದಲ್ಲಿ ವಿದೇಶಿ ಬಂಡಾವಾಳ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಿದೆ. ಅಲ್ಲದೆ ರೈಲ್ವೆಯನ್ನು ಖಾಸಗೀಕರಣಗೊಳಿಸಲು ನಿರ್ಧಿಸಿದೆ. ಸರ್ಕಾರದ ಈ ಕ್ರಮ ಸರಿಯಲ್ಲ ಎಂದ ಅವರು, ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕಾರ್ಮಿಕರಿಗೆ 15 ಸಾವಿರ ಕನಿಷ್ಟ ವೇತನ ನೀಡುವಂತೆ ಕೋರಲಾಗಿತ್ತು. ಆದರೆ ಸರ್ಕಾರ 7 ಸಾವಿರ ನಿಗದಿಗೊಳಿಸಲು ನಿರ್ಧರಿಸಿದೆ. ಸರ್ಕಾರದ ವರ್ತನೆ ಹೀಗೆಯೇ ಮುಂದುವರಿದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.  
 
ಸಮಾವೇಶ ಮುಗಿದ ಬಳಿಕ ಪ್ರತಿಭಟನಾಕಾರರು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಂಡರು. ಈ ಬಂದ್‌ನ್ನು ರಾಷ್ಟ್ರ ಮಟ್ಟದ 10ಕ್ಕೂ ಅಧಿಕ ಸಂಘಟನೆಗಳು ಆಯೋಜಿಸಿದ್ದವು. 

ವೆಬ್ದುನಿಯಾವನ್ನು ಓದಿ