ಐಸಿಸ್ ಉಗ್ರರಿಂದ ಭಾರತೀಯರ ಅಪಹರಣ ಪ್ರಕರಣ: ಇಬ್ಬರು ಸುರಕ್ಷಿತ ಎಂದ ಸುಷ್ಮಾ

ಶುಕ್ರವಾರ, 31 ಜುಲೈ 2015 (18:39 IST)
ಲಿಬಿಯಾದಲ್ಲಿ ಭಾರತೀರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದು, ಅಪಹರಣಕ್ಕೊಳಗಾಗಿದ್ದ ಇಬ್ಬರು ಕನ್ನಡಿಗರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. 
 
ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಉಗ್ರರು ಒಟ್ಟು ನಾಲ್ವರನ್ನು ಅಪಹರಿಸಿದ್ದರು. ಅವರಲ್ಲಿ ಇಬ್ಬರನ್ನು ಈಗಾಗಲೇ ರಕ್ಷಿಸಲಾಗಿದೆ. ರಕ್ಷಿತರು ಇಲ್ಲಿನ ಲಿಬಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಮೂಲದವರಾಗಿದ್ದು, ಲಕ್ಷಿಕಾಂತ್ ಹಾಗೂ ವಿಜಯ್ ಕುಮಾರ್ ಅವರೇ ಆಗಿದ್ದಾರೆ. ಅವರನ್ನು ನಮ್ಮ ಅಧಿಕಾರಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ. 
 
ಇನ್ನು ಲಿಬಿಯಾ ಸರ್ಕಾರದೊಂದಿಗೆ ದೇಶೀಯ ವಿದೇಶಾಂಗ ಇಲಾಖೆಯ ಅಧಿಕಾರಿಗಳು ನಿರಂತರ ಸಂಪರ್ಕ ಸಾಧಿಸುತ್ತಿದ್ದು, ಮತ್ತಿಬ್ಬರನ್ನೂ ಕೂಡ ಶೀಘ್ರವೇ ರಕ್ಷಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 
 
ಇನ್ನು ತಮ್ಮ ತಾಯ್ನಾಡಿಗೆ ವಾಪಾಸಾಗುತ್ತಿದ್ದ ವೇಳೆಯಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಐಸಿಸ್ ಉಗ್ರರು ನಾಲ್ವರು ಭಾರತೀಯರನ್ನು ಹಿಂದೂಗಳು ಎಂಬ ಕಾರಣಕ್ಕೆ ಜುಲೈ 27ರಂದು ಅಪಹರಿಸಿದ್ದರು. ಇವರಲ್ಲಿ ಇಬ್ಬರು ಕನ್ನಡಿಗರಾಗಿದ್ದರೆ, ಮತ್ತಿಬ್ಬರು ತೆಲಂಗಾಣ ಹಾಗೂ ಸೀಮಾಂಧ್ರ ರಾಜ್ಯಗಳಿಗೆ ಸೇರಿದವರಾಗಿದ್ದರು. ಮತ್ತಿಬ್ಬರ ಹೆಸರು ಗೋಪಿಕೃಷ್ಣ ಹಾಗೂ ಬಲರಾಮ್ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ