ನೇತ್ರದಾನಿ ಹರೀಶ್ ಪರಿವಾರಕ್ಕೆ ಫ್ಲ್ಯಾಟ್‌ ನೀಡಿದ ಇಂಡ್ಯಾ ಎಸ್ಟೇಟ್‌

ಭಾನುವಾರ, 21 ಫೆಬ್ರವರಿ 2016 (13:52 IST)
ನೆಲಮಂಗಲದ ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ದೇಹ ಎರಡು ತುಂಡಾಗಿದ್ದರೂ, ‘ ಕಣ್ಣು ದಾನ ಮಾಡಿ’ ಎಂದು ಹೇಳಿ ಕೊನೆಯುಸಿರೆಳೆದ ಯುವಕ ಹರೀಶ್ ಕುಟುಂಬದ ನೆರವಿಗೆ ಬಂದಿರುವ ಇಂಡ್ಯಾ ಎಸ್ಟೇಟ್‌ ಸಂಸ್ಥೆ ಫ್ಲ್ಯಾಟ್‌ ನೀಡಿದೆ.
 
ಆನೆಕಲ್‌– ಜಿಗಣಿ ಮಾರ್ಗದಲ್ಲಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಬೆಡ್‌ ರೂಂಗಳ ಫ್ಲ್ಯಾಟ್‌‌ನ್ನು ಸಂಸ್ಥೆ ಹರೀಶ್‌ ಕುಟುಂಬಕ್ಕೆ ನೀಡುತ್ತಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಇಂಡ್ಯಾ ಎಸ್ಟೇಟ್ ಸಂಸ್ಥೆ ಮಾಲೀಕ ಮನ್ಸೂರ್ ಅಹಮ್ಮದ್ ತಾಯಿ ಗೀತಮ್ಮ ಅವರಿಗೆ ಶನಿವಾರ ಹಸ್ತಾಂತರಿಸಿದ್ದಾರೆ. ಸಚಿವ ಟಿ.ಬಿ. ಜಯಚಂದ್ರ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.
 
ತುಮಕೂರು ಜಿಲ್ಲಿಯ ಗುಬ್ಬಿ ತಾಲೂಕಿನ ಕರೆಗೌಡನಹಳ್ಳಿಯ ನಿವಾಸಿ 26 ವರ್ಷದ ಹರೀಶ್ ಇದೇ ತಿಂಗಳ 16ರ ಬೆಳಗ್ಗೆ ತಮ್ಮ ಊರಿನಿಂದ ಬೈಕ್‌ನಲ್ಲಿ ಬೆಂಗಳೂರಿಗೆ ಮರಳುತ್ತಿದ್ದಾಗ ನೆಲಮಂಗಲದ ಬಳಿ ಅಪಘಾತಕ್ಕೀಡಾಗಿದ್ದರು. ಅವರ ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ ಮೈಮೇಲೆ ಹರಿದು ಹೋಗಿದ್ದರಿಂದ ದೇಹ  ಎರಡು ತುಂಡಾಗಿತ್ತು. ಘಟನೆ ಬಳಿಕವೂ 10 ನಿಮಿಷ ಬದುಕಿದ್ದ ಹರೀಶ್ ತಮ್ಮ ದೇಹದ ಅಂಗಾಂಗಳನ್ನು ದಾನ ಮಾಡುವಂತೆ ಹೇಳಿ ಪ್ರಾಣ ಬಿಟ್ಟಿದ್ದರು. ಆದರೆ ಅವರ ಕಣ್ಣುಗಳನ್ನಷ್ಟೇ ಪಡೆಯಲು ಸಾಧ್ಯವಾಗಿದ್ದು ಅವುಗಳನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿದೆ. 

ವೆಬ್ದುನಿಯಾವನ್ನು ಓದಿ