ಕೊನೆಗೂ ಎಚ್ಚೆತ್ತುಕೊಂಡ ವಾರ್ತಾ ಸಚಿವರು: ಜಾಹೀರಾತು ತೆರವಿಗೆ ಸೂಚನೆ

ಶನಿವಾರ, 23 ಮೇ 2015 (12:29 IST)
ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ತಮ್ಮ ಪುತ್ರ ಕಾಣಿಸಿಕೊಳ್ಳುವಂತೆ ಮಾಡಿದ್ದು, ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ರಾಜ್ಯದ ವಾರ್ತಾ ಸಚಿವ ರೋಷನ್ ಬೇಗ್ ಅವರು ಕೊನೆಗೂ ಎಚ್ಚೆತ್ತುಕೊಂಡಿದ್ದು, ಇಲಾಖೆ ವತಿಯಿಂದ ಅಳವಡಿಸಲಾಗಿರುವ, ಟೀಕೆಗೆ ಗುರಿಯಾಗಿರುವ ಎಲ್ಲಾ ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.  
 
ಮೂಲಗಳ ಪ್ರಕಾರ, ಸಚಿವರು ವಾರ್ತಾಧಿಕಾರಿಗಳಿಗೆ ತಮ್ಮ ಪುತ್ರ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡಿರುವ ಎಲ್ಲಾ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈಗಾಗಲೇ ಜಾಹೀರಾತು ಫಲಕಗಳ ತೆರವು ಕಾರ್ಯದಲ್ಲಿ ತೊಡಗಿದ್ದಾರೆ. 
 
ಇನ್ನು ವಾರ್ತಾ ಇಲಾಖೆ ವತಿಯಿಂದ ಈ ಹಿಂದೆ ಅಳವಡಿಸಲಾಗಿದ್ದ ಜಾಹೀರಾತುಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಚಿವ ರೋಷನ್ ಬೇಗ್ ಅವರ ಪುತ್ರ ರೂಮಾನ್ ಬೇಗ್ ನಿಂತಿದ್ದು, ಸಿಎಂ ಅವರನ್ನು ಸ್ವಾಗತಿಸುತ್ತಿರುವ ಭಾವಚಿತ್ರವನ್ನು ಪ್ರದರ್ಶಿಸಲಾಗಿತ್ತು. ಇದರಿಂದ ಸಚಿವರು ತಮ್ಮ ಮಗನನ್ನು ರಾಜಕೀಯದಲ್ಲಿ ಬೆಳೆಸುವ ಉದ್ದೇಶದಿಂದ ಈ ತಂತ್ರವನ್ನು ರೂಪಿಸಿದ್ದಾರೆ ಎಂಬ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಚಿವರು ಅಂತಹ ಜಾಹೀರಾತುಗಳನ್ನು ತೆರವುಗೊಳಿಸುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 
 
ಸಿಎಂ ಸಿದ್ದರಾಮಯ್ಯ ಅವರು ವಾರ್ತಾ ಇಲಾಖೆಯ ಯಾವುದೇ ಕಾರ್ಯಕ್ರಮಗಳಿಗೆ ಆಗಮಿಸಿದರೂ ಕೂಡ ಅವರನ್ನು ಸ್ವಾತಿಸುವುದನ್ನು ಸಚಿವರ ಪತ್ರ ರೂಮಾನ್ ರೂಢಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದೇ ಸಂದರ್ಭದ ಛಾಯಾಚಿತ್ರಗಳನ್ನು ಜಾಹೀರಾತುಗಳಲ್ಲಿ ಅಳವಡಿಸಲಾಗಿತ್ತು. ಇದು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ರಾಜಕೀಯ ಟೀಕೆಗೂ ಗುರಿಯಾಗಿತ್ತು. 

ವೆಬ್ದುನಿಯಾವನ್ನು ಓದಿ