ಯಮೆನ್‌ನಲ್ಲಿ ಆಂತರಿಕ ಬಿಕ್ಕಟ್ಟು: ಹಿಂದಿರುಗಲಾಗದೆ ಭಾರತೀಯನ ಪರದಾಟ

ಸೋಮವಾರ, 30 ಮಾರ್ಚ್ 2015 (12:49 IST)
ಕಾರ್ಯ ನಿಮಿತ್ತ ಯಮೆನ್ ದೇಶಕ್ಕೆ ತೆರಳಿದ್ದ ನಗರದ ನಾಗರೀಕರೋರ್ವರು ಅಲ್ಲಿನ ಆಂತರಿಕ ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದು, ತವರಿಗೆ ಬರಲಾಗದೆ ನರಳುತ್ತಿದ್ದಾರೆ.   
 
ಇನ್ನು ಅಲ್ಲಿನ ಆಂತರಿಕ ಗಲಬೆ ಪರಿಣಾಮ ತವರಿಗೆ ವಾಪಾಸಾಗಲು ಸಾಧ್ಯವಾಗದೆ ನರಳುತ್ತಿರುವ ವ್ಯಕ್ತಿಯನ್ನು ರವಿ ಕುಮಾರ್ ಎಂದು ಹೇಳಲಾಗಿದ್ದು, ನಗರದ ತಿಗಳರಪಾಳ್ಯದ ನಿವಾಸಿ ಎಂದು ಹೇಳಲಾಗಿದೆ. ರವಿ ಅವರು ವೈಯಕ್ತಿಕ ಕಾರ್ಯ ನಿಮಿತ್ತ ಮಾರ್ಚ್ 12ರಂದು ಯೆಮೆನ್‌ಗೆ ತೆರಳಿ ರಾಜಧಾನಿ ಸನಾ ನಗರದಲ್ಲಿ ತಂಗಿದ್ದರು. ಅವರು ಬಳಿಕ ಮಾರ್ಚ್ 24ರಂದು ವಿಮಾನ ಏರಿ ಸ್ವದೇಶಕ್ಕೆ ವಾಪಾಸಾಗುವ ದಿನಾಂಕ ನಿಗದಿಯಾಗಿತ್ತು. ಆದರೆ, ಆ ನಡುವೆ ಅಲ್ಲಿನ ನಾಗರೀಕರು ಸರ್ಕಾರದ ವಿರುದ್ಧ ತಿರುಗಿ ಬಿದ್ಧಿರುವ ಹಿನ್ನೆಲೆಯಲ್ಲಿ ರವಿಕುಮಾರ್ ಪರಿತಪಿಸುವಂತಾಗಿದೆ. 
 
ಇಲ್ಲಿನ ಜನರು ಸರ್ಕಾರದ ಆಡಳಿತ ವೈಖರಿ ವಿರುದ್ಧ ಬಂಡೆದಿದ್ದು, ಬಾಂಬ್ ಸ್ಫೋಟ, ಪ್ರತಿಭಟನೆ ಇನ್ನಿತರೆ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ತೀವ್ರ ರೀತಿಯ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಆಂತರಿಕ ಬಿಕ್ಕಟ್ಟು ತಲೆದೋರಿದ್ದು, ಸರ್ಕಾರದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವೂ ಕೂಡ ಸ್ಥಗಿತಗೊಂಡಿದೆ. ಪರಿಣಾಮ ತವರಿಗೆ ಬರಲಾಗದೆ ರವಿಕುಮಾರ್ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. 
 
ಇನ್ನು ರವಿಕುಮಾರ್ ಅವರ ಕುಟುಂಬದ ಮೂಲಗಳ ಪ್ರಕಾರ, ರವಿ ಅವರು ಈಗಾಗಲೇ ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಸ್ವದೇಶಕ್ಕೆ ಮರಳಲು ಸಹಾಯ ಕೋರಿದ್ದಾರೆ ಎನ್ನಲಾಗಿದ್ದು, ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ. 

ವೆಬ್ದುನಿಯಾವನ್ನು ಓದಿ