ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಆತಂಕಕಾರಿ, ಅಪಾಯಕಾರಿ: ಸಿದ್ದರಾಮಯ್ಯ

ಶನಿವಾರ, 28 ನವೆಂಬರ್ 2015 (13:37 IST)
ವಿಧಾನಸೌಧದಲ್ಲಿ 528ನೇ  ಕನಕಜಯಂತಿ ಆಚರಣೆ ಸಂದರ್ಭದಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಿಷ್ಣುತೆ ದೇಶದಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ, ಅಪಾಯಕಾರಿ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.  

ಕನಕಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕನಕದಾಸರು ದಾಸರಲ್ಲಿ ದಾಸರಾಗಿದ್ದರು. ಕನಕದಾಸ, ಪುರಂದರದಾಸ ದಾಸಸಾಹಿತ್ಯದ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು  ಹೇಳಿಕೆ ನೀಡಿದ್ದ  ಬಾಲಿವುಡ್ ಚಿತ್ರನಟರಾದ ಅಮೀರ್ ಖಾನ್ ಮತ್ತು ಶಾರೂಖ್ ಖಾನ್ ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ಎದುರಿಸಿದ್ದರು.

ಈಗ ಸಿದ್ದರಾಮಯ್ಯ ಕೂಡ ಅಸಹಿಷ್ಣುತೆ ಹೆಚ್ಚುತ್ತಿರುವುದು ಆತಂಕಕಾರಿ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಆಸ್ಪದ ಕಲ್ಪಿಸಿದ್ದಾರೆ..   ಸಿಎಂ ಭಾಷಣದ ವೇಳೆ ಕೆಲವರು ಶಿಳ್ಳೆ  ಹೊಡೆದು ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಈ ವೇಳೆಗೆ ಶಿಳ್ಳೆ ಹೊಡೆಯದಂತೆ ಸಿಎಂ ಗದರಿಸಿದರು. ಇದು ಸಿನೆಮಾ ಥಿಯೇಟರ್ ಅಲ್ಲ. ಶಿಳ್ಳೆ ಹೊಡೆಯಬೇಡಿ ಎಂದರು.  ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಲಾಗುತ್ತಿದೆ. ಈ ಹಿಂದೆಯೂ ನಡೆಯುತ್ತಿತ್ತು. ಈಗಲೂ ನಡೆಯುತ್ತಿದೆ. ಬಸವಣ್ಣ, ಕನಕದಾಸರ ಕಾಲದಲ್ಲೂ ಜಾತಿವ್ಯವಸ್ಥೆ ಇತ್ತು.  ಹಿಂದುತ್ವದ ಹೆಸರಿನಲ್ಲಿ ಮೂಲತತ್ವದ ವಿರುದ್ಧ ಪ್ರಚಾರ ಅಪಾಯಕಾರಿ ಎಂದು ಬಿಜೆಪಿ ಹೆಸರು ಹೇಳದೆ ಪರೋಕ್ಷವಾಗಿ  ಸಿಎಂ ಟಾಂಗ್ ನೀಡಿದರು. 

ವೆಬ್ದುನಿಯಾವನ್ನು ಓದಿ