ಪ್ರಧಾನಿ 'ದರ್ಶನ' ನೀಡಲು ಅವರೇನು ದೇವರೇ? ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಬುಧವಾರ, 23 ಜುಲೈ 2014 (18:58 IST)
ಪ್ರಧಾನಮಂತ್ರಿ ದರ್ಶನ ನೀಡಲು ಅವರೇನು ದೇವರೇ? ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದಾಗ ಲೋಕಸಭೆ ಸದಸ್ಯರು ನಗೆಗಡಲಲ್ಲಿ ಮುಳುಗಿದರು. 
 
ನರೇಂದ್ರ ಮೋದಿ ಸಂಸತ್ತಿನಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ತಮ್ಮ ಮುಖ ತೋರಿಸಲಿ ಎಂದು ಮಂಗಳವಾರ ಖರ್ಗೆ ಹೇಳಿದ್ದರಿಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಪ್ರತಿಕ್ರಿಯಿಸಿ, ಪ್ರಧಾನಮಂತ್ರಿ ಪ್ರಶ್ನೋತ್ತರ ವೇಳೆಯಲ್ಲಿ ಆಗಮಿಸಲಿದ್ದು, ನಿಮಗೆ ಅವರ ದರ್ಶನ ಸಿಗುತ್ತದೆ ಎಂದು ಹೇಳಿದ್ದರು.ಆಗಾಗ್ಗೆ ದರ್ಶನ ನೀಡುವುದಕ್ಕೆ ಪ್ರಧಾನಮಂತ್ರಿ ದೇವರ ಅವತಾರವೇ ಎಂದು ಖರ್ಗೆ ತಕ್ಷಣವೇ ಉತ್ತರಿಸಿದರು.

ಪ್ರಧಾನಿ ವಾರಕ್ಕೊಮ್ಮೆಯಾದರೂ ತಮ್ಮ ಮುಖ ತೋರಿಸಲಿ. ಇಲ್ಲಿಗೆ ಪ್ರತಿನಿತ್ಯ ಬರಬೇಕೆಂದು ನಾನು ನಿರೀಕ್ಷಿಸುವುದಿಲ್ಲ. ಬಜೆಟ್ ಅಧಿವೇಶನದ ನಂತರ ಅವರು ಸದನಕ್ಕೆ ಬಂದೇ ಇಲ್ಲ ಎಂದು ಖರ್ಗೆ ಹೇಳಿದರು. ಪ್ರಧಾನಮಂತ್ರಿ ಸದನದಲ್ಲಿ ಹೇಳಿಕೆ ನೀಡಲು ಸದನ ಬಯಸುತ್ತದೆ ಎಂದು ಖರ್ಗೆ ಹೇಳಿದರು.

 ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಬ್ರಿಕ್ಸ್ ಶೃಂಗಸಭೆಗೆ ಕರೆದುಕೊಂಡು ಹೋಗಲಿಲ್ಲವೇ ಎಂಬ ಖರ್ಗೆ ಪ್ರಶ್ನೆಗೆ, ಬಜೆಟ್ ಅಧಿವೇಶನ ಇಲ್ಲದಿದ್ದರೆ, ತಾವು ಪ್ರಧಾನಿ ಜೊತೆ ಹೋಗುತ್ತಿದ್ದೆ ಎಂದು ಸುಷ್ಮಾ ಉತ್ತರಿಸಿದರು. 

ವೆಬ್ದುನಿಯಾವನ್ನು ಓದಿ