ಐಸಿಸ್ ಉಗ್ರರಿಂದ ಅಪಹರಣ ಪ್ರಕರಣ: ತಾಯ್ನಾಡಿಗೆ ವಾಪಾಸಾದ ಕನ್ನಡಿಗರು

ಮಂಗಳವಾರ, 4 ಆಗಸ್ಟ್ 2015 (10:56 IST)
ಲಿಬಿಯಾದ ಟ್ರಿಪೊಲಿಯಲ್ಲಿನ ಏರ್ಪೋರ್ಟ್‌ನಲ್ಲಿ ಐಎಸ್ಐಎಸ್ ಉಗ್ರರ ಕಪಿಮುಷ್ಠಿಗೆ ಸಿಲುಕಿ ಬಿಡುಗಡೆಗೊಂಡಿದ್ದ ಕನ್ನಡಿಗರಾದ ಲಕ್ಷ್ಮಿಕಾಂತ್ ಹಾಗೂ ವಿಜಯ್ ಕುಮಾರ್ ಅವರು ಇಂದು ತಾಯ್ನಾಡಿಗೆ ಬಂದಿಳಿದಿದ್ದಾರೆ. 
 
ಲಕ್ಷ್ಮಿಕಾಂತ್ ಮೂಲತಃ ರಾಯಚೀರಿನವರಾಗಿದ್ದರೆ, ವಿಜಯ್ ಕುಮಾರ್ ಕೋಲಾರದ ಬಂಗಾರಪೇಟೆ ನಿವಾಸಿಯಾಗಿದ್ದರು. ಈ ಇಬ್ಬರೂ ಕೂಡ ಲಿಬಿಯಾದ ಶಿರ್ತೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಜುಲೈ 27ರಂದು ಸಂಜೆ ತಮ್ಮ ತಾಯ್ನಾಡಿಗೆ ವಾಪಾಸಾಗುತ್ತಿದ್ದಾಗ ಅವರನ್ನು ಉಗ್ರರು ಅಪಹರಿಸಿದ್ದರು. ಬಳಿಕ ಒಂದು ದಿನ ತಮ್ಮ ಬಳಿ ಇರಿಸಿಕೊಂಡಿದ್ದ ಉಗ್ರರು, ಇವರನ್ನು ಮತ್ತೆ ಬಿಡುಗಡೆಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ತಾಯ್ನಾಡಿಗೆ ವಾಪಾಸಾಗಿದ್ದಾರೆ. 
 
ಇನ್ನು ಲಕ್ಷ್ಮಿಕಾಂತ್ ಅವರು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವರನ್ನು ಸ್ವಾಗತಿಸುವ ಸಲುವಾಗಿ ಅವರ ಪತ್ನಿ ಡಾ.ಪ್ರತಿಭಾ ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ವಿಶೇಷ ವಾಹನದದೊಂದಿಗೆ ಕರೆದೊಯ್ಯಲು ಆಗಮಿಸಿದ್ದರು. ಆದರೆ ಲಕ್ಷ್ಮಿಕಾಂತ್ ಅವರು ಅವರ ಕೈಗೆ ಸಿಗದೆ ತಾವೇ ಸ್ವತಃ ಖಾಸಗಿ ವಾಹನ ಮಾಡಿಕೊಂಡು ಪತ್ತೆ ಇಲ್ಲದಂತೆ ನಿವಾಸಕ್ಕೆ ತೆರಳಿದ್ದಾರೆ. 
 
ಇನ್ನು ಲಕ್ಷ್ಮಿಕಾಂತ್ ನಿನ್ನೆ ರಾತ್ರಿ 7.30ಕ್ಕೆ ನಿಲ್ದಾಣಕ್ಕೆ ಆಗಮಿಸಿದರು ಎನ್ನಲಾಗಿದ್ದು, ಇವರೊಂದಿಗೆ ಆಂಧ್ರ ಪ್ರದೇಶದ ಬಲರಾಮ್ ಹಾಗೂ ಗೋಪಿಕೃಷ್ಣ ಎಂಬುವವರನ್ನೂ ಕೂಡ ಉಗ್ರರು ಅಪಹರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಬ್ಬರ ಕುಟುಂಬ ಸದಸ್ಯರೊಂದಿಗೆ ಲಕ್ಷ್ಮಿಕಾಂತ್ ಚರ್ಚಿಸಿದರು ಎನ್ನಲಾಗಿದೆ. 
 
ಮತ್ತೋರ್ವ ಕನ್ನಡಿಗ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವರನ್ನು ಕುಟುಂಬಸ್ಥರು ಸ್ವಾಗತಿಸಿದ್ದಾರೆ. ಇಬ್ಬರೂ ಕನ್ನಡಿಗರು ತಾಯ್ನಾಡಿಗೆ ವಾಪಾಸಾಗಿರುವ ಕಾರಣ ಇಬ್ಬರ ಕುಟುಂಬದಲ್ಲಿ ಹರ್ಷ ಮನೆ ಮಾಡಿದೆ. 
 
ವಾಪಾಸಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಲ್ಲದೆ ನಮ್ಮ ಮಗ ಮನೆಗೆ ವಾಪಾಸಾಗಿರುವುದು ಸಂತಸ ತಂದಿದ್ದು, ಮರುಜನ್ಮ ಪಡೆದಂತಾಗಿದೆ. ಈ ಯಶಸ್ಸಿಗಾಗಿ ಶ್ರಮಿಸಿದ ಮಾಧ್ಯಮ ಹಾಗೂ ಸರ್ಕಾರಕ್ಕೆ ಧನ್ಯವಾದ ಎಂದರು. 

ವೆಬ್ದುನಿಯಾವನ್ನು ಓದಿ