ಐಸಿಸ್ ಉಗ್ರರಿಂದ ಭಾರತೀಯರ ಅಪಹರಣ ಪ್ರಕರಣ: ಕನ್ನಡಿಗರಿಬ್ಬರ ಬಿಡುಗಡೆ ಮತ್ತಿಬ್ಬರಿಗೆ ಬಂಧನ

ಶನಿವಾರ, 1 ಆಗಸ್ಟ್ 2015 (12:26 IST)
ಕಳೆದ ಜುಲೈ 27ರಂದು ಲಿಬಿಯಾದ ಟ್ರಿಪೊಲಿಯಲ್ಲಿ ಐಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ನಾಲ್ವರು ಭಾರತೀಯರಲ್ಲಿ ಇಬ್ಬರನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದ್ದು, ಮತ್ತಿಬ್ಬರನ್ನು ವಶದಲ್ಲಿಯೇ ಇಟ್ಟುಕೊಂಡಿದ್ದಾರೆ ಎಂಬುದಾಗಿ ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಸ್ಪಷ್ಟಪಡಿಸಿದ್ದಾರೆ. 
 
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕನ್ನಡಿಗರಾದ ಲಕ್ಷ್ಮಿಕಾಂತ್ ಹಾಗೂ ವಿಜಯ್ ಕುಮಾರ್ ಅವರು ಬಿಡುಗಡೆಗೊಂಡಿದ್ದು, ಆಂಧ್ರ ಮೂಲದ ಮತ್ತಿಬ್ಬರು ಅವರ ವಶದಲ್ಲಿಯೇ ಇದ್ದಾರೆ ಎಂದಿದ್ದಾರೆ. 
 
ಇನ್ನು ಲಕ್ಷ್ಮಿಕಾಂತ್ ಅವರು ಅಲ್ಲಿನ ಶಿರ್ತೆ ವಿಶ್ವ ವಿದ್ಯಾಲಯದ ಎಂಜಿನಿಯರಿಂಗ್ ಮುಖ್ಯಸ್ಥರಾಗಿ ಹಾಗೂ ವಿಜಯ್ ಕುಮಾರ್ ಅವರು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ನಾಲ್ವರೂ ಭಾರತೀಯರು ತಮ್ಮ ತಾಯ್ನಾಡಿಗೆ ಹಿಂದಿರುಗಲು ಸಿದ್ಧತೆ ನಡೆಸಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರನ್ನು ಅಡ್ಡಗಟ್ಟಿದ ಐಸಿಸ್ ಉಗ್ರರು, ನಾಲ್ವರನ್ನೂ ಕೂಡ ತಮ್ಮ ಅಡಗು ತಾಣಕ್ಕೆ ಕರೆದೊಯ್ದರು ಎನ್ನಲಾಗಿದೆ. 
 
ಈ ವೇಳೆ ತಾವು ಯಾವ ಧರ್ಮದವರು ಎಂದು ಪ್ರಶ್ನಿಸಿದ್ದು, ತಮ್ಮ ಮಕ್ಕಳಿಗೆ ಶಿಕ್ಷಣ ಹೇಳಿಕೊಟ್ಟಿದ್ದೀರಿ ಆದ ಕಾರಣ ನಿಮ್ಮನ್ನು ಬಿಡುತ್ತಿದ್ದೇವೆ ಹೋಗಿ ಎಂದು ಕನ್ನಡಿಗರಿಬ್ಬರನ್ನು ಬಿಟ್ಟಿದ್ದು, ಆಂಧ್ರ ಮೂಲದ ಇಬ್ಬರನ್ನು ವಶದಲ್ಲಿಯೇ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಅವರನ್ನೂ ಕಳುಹಿಸುವಂತೆ ಬಿಡುಗಡೆಗೊಂಡ ಕನ್ನಡಿಗರು ಕೇಳಿದರು ಎನ್ನಲಾಗಿದ್ದು, ಅವರನ್ನು ನಾವು ಮತ್ತೆ ಬಿಡುತ್ತೇವೆ. ನೀವು ಹೋಗಿ ಎಂದಿದ್ದಾರೆ ಎಂದು ತಿಳಿದು ಬಂದಿದೆ. 
 
ಇನ್ನು ಅಪಹರಣಕ್ಕೊಳಗಾಗಿದ್ದ ಇಬ್ಬರೂ ಕನ್ನಡಿಗರು ಮಾಧ್ಯಗಳೊಂದಿಗೆ ಮಾತನಾಡಿದ್ದು, ಸಂಭಾಷಣೆ ಕೆಳಗಿನಂತಿದೆ. 
 
ಲಕ್ಷ್ಮಿಕಾಂತ್, ನಾವು ನಾಲ್ವರು ಒಟ್ಟಿಗೆ ಬರುತ್ತಿದ್ದೆವು. ಬಳಕ ಕಾರನ್ನು ಅಡ್ಡಗಟ್ಟಿದ ಯುವಕರ ಗುಂಪೊಂದು ನಮ್ಮನ್ನು ತಮ್ಮ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋದರು. ಕಾರು ಏರಿದಾಗ ತಲೆ ತಗ್ಗಿಸಲು ಹೇಳಿದರು. ಹಾಗೆಯೇ ನಡೆದುಕೊಂಡೆವು. ಬಳಿಕ ಎಲ್ಲರ ಬಳಿ ಇದ್ದ ಫೋನನ್ನು ವಶಕ್ಕೆ ಪಡೆದರು. ಬಳಿಕಮನೆಯೊಂದಕ್ಕೆ ಕರೆದೊಯ್ದರು. ಒಂದು ಗಂಟೆ ಕಾದೆವು. ಬಳಿಕ ಯಜಮಾನ ಬಂದು ಮತ್ತೊಂದು ಕಾರಿನಲ್ಲಿ ಕುಳ್ಳಿರಿಸಿಕೊಂಡು ಮನೆಯಂತಹ ತಾಣಕ್ಕೆ ಕರೆದೊಯ್ದು, ಅಲ್ಲಿ ಬಿಟ್ಟು, ಲಾಕ್ ಮಾಡಿಕೊಂಡು ಹೋದರು. ಅವರಲ್ಲಿ ನಮ್ಮ ವಿದ್ಯಾರ್ಥಿಯೋರ್ವನೂ ಇದ್ದ. ಕಾರಣ ನಾವು ಶಿಕ್ಷಕರೆಂದು ಅವರಿಗೆ ತಿಳಿದಿತ್ತು. ಬಳಿಕ ನಮ್ಮನ್ನು ಬಿಡುಗಡೆಗೊಳಿಸಿದರು ಎಂದರು. 
 
ಇದೇ ವೇಳೆ, ಬಂಧನಕ್ಕೊಳಗಾಗಿದ್ದ ನಮಗೆ ಬೆದರಿಕೆ ಹಾಗೂ ಆತಂಕವಿತ್ತು. ಅವರೇನೂ ಕಣ್ಣಗೆ ಬಟ್ಟೆ ಕಟ್ಟಿರಲಿಲ್ಲ. ಆದ್ದರಿಂದ ಅಷ್ಟಾಗಿ ಭಯವೇನೂ ಆಗಲಿಲ್ಲ. ಕೊನೆಗೂ ನಮ್ಮನ್ನು ಬಿಡುಗಡೆಗೊಳಿಸಿದರು. ಆಗ ನಮ್ಮನ್ನು ಸ್ಥಳಾಂತರಿಸಿದ ವ್ಯಕ್ತಿಯನ್ನು ಅವರನ್ನೂ ಬಿಟ್ಟಿದ್ದರೆ ನಾವು ಒಟ್ಟಿಗೆ ತೆರಳುತ್ತಿದ್ದೆವು ಎಂದು ಮನವಿ ಮಾಡಿಕೊಂಡೆವು. ಆದರೆ ಅದಕ್ಕೆ ಪ್ರತಿಕ್ರಿಯಿಸಿದ ಅವರು, ನೀವು ಹೋಗಿ ಅವರನ್ನೂ ಬಿಡುತ್ತೇವೆ ಎಂಬ ಭರವಸೆ ನೀಡಿದರು.   
 
ಬಳಿಕ, ಇದು ಅಪಹರಣ ಎಂದು ನನಗನಿಸುವುದಿಲ್ಲ. ಏಕೆಂದರೆ ಅವರು ನಮ್ಮನ್ನು ಸರಕ್ಷಿತವಾಗಿಯೇ ಕರೆದೊಯ್ದರು. ನಾವು ಮುಸ್ಲಿಂ ಅಲ್ಲ ಎಂಬ ಕಾರಣದಿಂದ ಈ ರೀತಿ ನಡೆದುಕೊಂಡಿದ್ದಾರೆ. ಆದರೆ ಅವರಿಗೆ ಭಾರತೀಯರ ಮೇಲೆ ನಂಬಿಕೆ ಇದೆ. ಆದ್ದರಿಂದ ನಾವು ಸುರಕ್ಷಿತವಾಗಿದ್ದೇವೆ. ನಮ್ಮನ್ನು ಸರಕುಗಳನ್ನು ಚೆಕ್ ಮಾಡಿದ್ದರು. ಬೇರೇನೂ ಮಾಡಲಿಲ್ಲ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ