ಹೊಸ ಕೇಸ್ ದಾಖಲಿಸಿ ಜನಾರ್ದನ ರೆಡ್ಡಿಯನ್ನು ಬಂಧಿಸಿದ ಎಸ್‌ಐಟಿ ಪೊಲೀಸರು

ಶುಕ್ರವಾರ, 20 ನವೆಂಬರ್ 2015 (14:12 IST)
ಅಕ್ರಮ ಗಣಿಗಾರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಸುಮಾರು ಮೂರುವರೆ ವರ್ಷಗಳ ಕಾಲ ಜೈಲುವಾಸ ಅನುಭವಿಸಿದ  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಕಂಟಕ ಎದುರಾಗಿದ್ದು, ಅವರ ವಿರುದ್ಧ  ಹೊಸ ಕೇಸ್ ದಾಖಲಿಸಿ  ಎಸ್‌ಐಟಿ ಬಂಧಿಸಿದೆ. ಎಸ್‌ಐಟಿ ವಿಚಾರಣೆಗೆ ಜನಾರ್ದನ ರೆಡ್ಡಿ ಹಾಜರಾಗಿದ್ದರು. ಇಂದು ಬೆಳಿಗ್ಗೆಯಿಂದ ಎಸ್‌ಐಟಿ ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ 11 ಪ್ರಕರಣಗಳ ವಿಚಾರಣೆ ನಡೆಸಿತು.

 ಕೆಲವು ಪ್ರಕರಣಗಳಲ್ಲಿ ರೆಡ್ಡಿ ಬೇಲ್ ಕೂಡ ಪಡೆದಿದ್ದರು. ಇಂದು ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ರೆಡ್ಡಿಯವರು ವಿಚಾರಣೆಗೆ ಹಾಜರಾಗಿದ್ದರು.  ರೆಡ್ಡಿ 13 ಕೇಸ್‌ಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಜನಾರ್ದನ ರೆಡ್ಡಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವಾರು ದಾಖಲಾತಿಗಳನ್ನು ಹಾಜರುಪಡಿಸುವಂತೆ ಎಸ್‌ಐಟಿ ಕೇಳಿದ್ದರೂ ಈ ದಾಖಲಾತಿಗಳನ್ನು ಒದಗಿಸಲು ರೆಡ್ಡಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಹೊಸ ಕೇಸ್ ದಾಖಲಿಸಿ  ರೆಡ್ಡಿಯನ್ನು ಬಂಧನಕ್ಕೆ ಒಳಪಡಿಸಿದರು. 

ವೆಬ್ದುನಿಯಾವನ್ನು ಓದಿ