ಅಬಕಾರಿ ಖಾತೆಯಲ್ಲಿಯೇ ಮುಂದುವರಿಯಲಿರುವ ಜಾರಕಿಹೋಳಿ

ಶನಿವಾರ, 31 ಜನವರಿ 2015 (10:45 IST)
ಅಬಕಾರಿ ಖಾತೆಯಲ್ಲಿ ಮುಂದುವರಿಯುವುದಿಲ್ಲ ಎಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸತೀಶ್ ಜಾರಕಿಹೋಳಿ ಅವರ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯನವರು ಕೊನೆಗೂ ಯಶಸ್ವಿಯಾಗಿದ್ದು, ರಾಜಿನಾಮೆ ಪ್ರಹಸನ ಅಂತ್ಯಗೊಂಡಿದೆ.

ಸಚಿವ ಡಾ. ಹೆಚ್. ಸಿ.ಮಹಾದೇವಪ್ಪ ನಿವಾಸದಲ್ಲಿ ನಿನ್ನೆ ತಡರಾತ್ರಿ ನಡೆದ ಸಂಧಾನ ಸಭೆಯು ಪ್ರತಿಫಲ ನೀಡಿದ್ದು, ಜಾರಕಿಹೋಳಿ ಬೇಡಿಕೆಗೆ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ. ಆದರೆ, ಸಚಿವ ಸಂಪುಟ ಪುನರ್‌ರಚನೆ ಆಗುವ ವರೆಗೆ ಜಾರಕಿಹೋಳಿ ಅಬಕಾರಿ ಖಾತೆಯಲ್ಲೇ ಮುಂದುವರಿಯುವಂತೆ ಸೀಚಿಸಿದ್ದಾರೆ ಎನ್ನಲಾಗಿದೆ.

ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ ಅವರು ತಮ್ಮ ಹಿಂದಿನ ಖಾತೆ ಅಬಕಾರಿಯಲ್ಲೇ ಮುಂದುವರಿಯಲಿದ್ದು, ಸಂಪುಟ ವಿಸ್ತರಣೆ ವೇಳೆಯಲ್ಲಿ ಅವರಿಗೆ ಉತ್ತಮ ಖಾತೆಯನ್ನು ವಹಿಸಲಾಗುವುದು. ಈ ಹಿನ್ನೆಲೆಯಲ್ಲಿ ಅವರು ನೀಡಿದ್ದ ರಾಜೀನಾಮೆ ಪತ್ರವನ್ನು ವಾಪಾಸ್ ಪಡೆಯಲಿದ್ದಾರೆ ಎಂದು ತಿಳಿಸಿದರು.

ರಾತ್ರಿ 8.30ಕ್ಕೆ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಜಾರಕಿಹೋಳಿ ಅವರು ಸಚಿವ ಮಹಾದೇವಪ್ಪ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಸಭೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳ ಶಾಸಕರಾದ ಫಿರೋಜ್ ಸೇಠ್, ಅಶೋಕ್ ಪಟ್ಟಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಡಿಕೆಶಿ ಹಾಗೂ ಬೆಳಗಾವಿ ಮುಖಂಡರು ಸೇರಿದ್ದರು.

ಸಭೆಯಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿರುವ ಈ ಸಂಧರ್ಭದಲ್ಲಿ ರಾಜೀನಾಮೆ ಬೆಳವಣಿಗೆ ಸರಿಯಲ್ಲ. ಹಾಗಾಗಿ ರಾಜೀನಾಮೆಯನ್ನು ಹಠಾತ್ತಾಗಿ ವಾಪಾಸ್ ಪಡೆಯಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.

ಈ ವೇಳೆ, ಜಾರಕಿಹೋಳಿ ಅವರನ್ನು ಸಂಬಾಳಿಸಲಾಯಿತು. ಇದೇ ಸಂದರ್ಭದಲ್ಲಿ ನಾನು ಅಧಿಕಾರಕ್ಕಾಗಿ ಎಂದೂ ಹಾತೊರೆದವನಲ್ಲ. ಸಿಎಂ ಜತೆ ನನಗೆ ಭಾವನಾತ್ಮಕ ಸಂಬಂಧವಿದೆ. ನಾನು ಅವರಿಂದ ಬಯಸುವುದು ಪ್ರೀತಿ ಮತ್ತು ಆತ್ಮೀಯತೆ ಮಾತ್ರ. ಆದರೆ ಇದಕ್ಕೆ ಕೆಲವರಿಂದ ಅಡ್ಡಿ ಬರುತ್ತಿದೆ. ಹೀಗಾಗಿ ಕಠಿಣ ತೀರ್ಮಾನ ಅನಿವಾರ್ಯವಾಯಿತು ಎಂದು ಜಾರಕಿಹೋಳಿ ಸಿಎಂ ಆಪ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

ಇನ್ನು ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟೀಕರಣ ನೀಡಿದ್ದು, ಸೂಕ್ತ ಸಮಯ ನೋಡಿ ಖಾತೆಯನ್ನು ಬದಲಾಯಿಸುವ ಭರವಸೆ ನೀಡಿದ್ದರು.

ಜಾರಕಿಹೋಳಿ ರಾಜೀನಾಮೆ ವಾಪಸ್:

ಸಭೆಯ ಬಳಿಕ ಪ್ರತಿಕ್ರಿಯಿಸಿದ ಸಚಿವ ಜಾರಕಿಹೋಳಿ, ನಾನು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಾಸ್ ಪಡೆಯುತ್ತಿದ್ದೇನೆ. ನನ್ನ ರಾಜಕಾರಣ ವಿಷಯದಲ್ಲಿ ರಾಜೀನಾಮೆ ನೀಡುವುದು ಅನಿವಾರ್ಯವಾರ್ಯವಾಗಿ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ಇಷ್ಟು ದಿನದ ಈ ಬೆಳವಣಿಗೆಗಳಿಗೆ ನಾನೇ ಕಾರಣ ಎಂದರು.

ವೆಬ್ದುನಿಯಾವನ್ನು ಓದಿ