ಜಯಲಲತಾ ಪ್ರಕರಣ ಬಿಜೆಪಿಯದ್ದು, ಕಾಂಗ್ರೆಸ್‌ದ್ದಲ್ಲ: ಜೈರಾಮ್ ರಮೇಶ್

ಭಾನುವಾರ, 24 ಮೇ 2015 (11:16 IST)
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ್ದಲ್ಲ. ಅದು ಬಿಜೆಪಿಯ ಜವಾಬ್ದಾರಿ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
 
ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜಯಲಲಿತಾ ವಿರುದ್ಧದ ಈ ಪ್ರಕರಣದಲ್ಲಿ ಬಿಜೆಪಿ ನಾಯಕರು ಅನಗತ್ಯವಾಗಿ ಕರ್ನಾಟಕದ ರಾಜ್ಯ ಸರ್ಕಾರವನ್ನು ದೂಷಿಸುತ್ತಿದ್ದಾರೆ ಎಂದು ಆರೋಪಿಸಿದ ವಅವರು, ಜಯಲಲಿತಾ ಪ್ರಕರಣಕ್ಕೂ ಕರ್ನಾಟಕ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ, ಕಾನೂನಾತ್ಮಕ ತೊಡಕಿನ ಕಾರಣದಿಂದಾಗಿ ಪ್ರಕರಣದ ವಿಚಾರಣೆ ಕರ್ನಾಟಕಕ್ಕೆ ಬಂದಿದೆ ಅಷ್ಟೆ. ಆದರೆ ಪ್ರಕರಣದ ಪ್ರಮುಖ ದೂರುದಾರ ಸುಬ್ರಮಣಿಯನ್ ಸ್ವಾಮಿ, ಸದ್ಯ ಬಿಜೆಪಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯೇ ಹೈಕೋರ್ಟ್ ವಿಶೇಷ ಪೀಠದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿ ಎಂದರು. 
 
ಇದೇ ವೇಳೆ, ವಾಸ್ತವವಾಗಿ ಈಗಾಗಲೇ ಬಿಜೆಪಿ ನಾಯಕರು ಮೇಲ್ಮನವಿ ಜವಾಬ್ದಾರಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೊರಿಸಲು ನೋಡುತ್ತಿದ್ದಾರೆ. ಅವರ ನಡೆ ನೋಡಿದರೆ ಬಂದೂಕನ್ನು ರಾಜ್ಯ ಸರ್ಕಾರದ ಭುಜದ ಮೇಲಿಟ್ಟು ಜಯಲಲಿತಾಗೆ ಗುರಿಯಾಗಿಸಿ ಹೊಡೆಯಲು ಹೇಳುವಂತಿದೆ ಎಂದು ದೂರಿದರು.

ವೆಬ್ದುನಿಯಾವನ್ನು ಓದಿ