ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಮೇಲ್ಮನವಿಗೆ ಸಲಹೆ ನೀಡಿದ್ದೇನೆ ಎಂದ ಎಜಿ

ಶುಕ್ರವಾರ, 22 ಮೇ 2015 (17:32 IST)
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ವಿರುದ್ಧ ಇದ್ದ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಎಜಿ ಪ್ರೊ.ರವಿವರ್ಮಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಸರ್ಕಾರವು ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ. ಅದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ. 
 
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ನ್ಯಾಯಾಲಯದ ನಿಯಮಗಳ ಪ್ರಕಾರ ತೀರ್ಪು ಹೊರಬಿದ್ದ 90 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬೇಕು. ಆದರೆ ಸರ್ಕಾರಕ್ಕೆ ಇಷ್ಟು ಅವಕಾಶ ಬೇಡವೇ ಬೇಡ. ಪ್ರಕರಣ ಸಂಬಂಧ ಸರ್ಕಾರ ಶೀಘ್ರದಲ್ಲಿಯೇ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದರು. 
 
ಬಳಿಕ ಮಾತನಾಡಿದ ಅವರು, ಈ ಸಂಬಂಧ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಕೆಲ ಸಾಧಾರಣ ತಪ್ಪುಗಳಿದ್ದು, ಆ ಸಂಬಂಧ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಆದ್ದರಿಂದ ಶೀಘ್ರದಲ್ಲಿಯೇ ಮೇಲ್ಮನವಿಸಲು ಸರ್ಕಾರವೂ ಕೂಡ ಗಂಭೀರವಾಗಿ ಚಿಂತಿಸುತ್ತಿದೆ. ಸರ್ಕಾರ ಭ್ರಷ್ಟಾಚಾರಿಗಳನ್ನು ಎಂದಿಗೂ ಸುಮ್ಮನೆ ಬಿಡುವುದಿಲ್ಲ ಎಂದರು. 
 
ಪ್ರಕರಣ ಸಂಬಂಧ ಹೈಕೋರ್ಟ್ ಕಳೆದ ಮೇ 11ರಂದು ತೀರ್ಪು ಪ್ರಕಟಿಸಿತ್ತು. ತೀರ್ಪಿನಲ್ಲಿ ಪ್ರಕರಣದ ಆರೋಪಿಗಳೆಲ್ಲರೂ ನಿರ್ದೋಷಿಗಳು ಎಂದು ಘೋಷಿಸಿ ಖುಲಾಸೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರ ಸಿದ್ಧವಾಗುತ್ತಿದೆ. 

ವೆಬ್ದುನಿಯಾವನ್ನು ಓದಿ